ಆಯೋಧ್ಯೆ : ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ದೇಶದ ಮೂಲೆ ಮೂಲೆಯಿಂದಲೂ ಭಕ್ತರು ಆಯೋಧ್ಯೆಯತ್ತ ಧಾವಿಸುತ್ತಿದ್ದಾರೆ. ಇನ್ನು ರಾಜ್ಯದಿಂದಲೂ ಅನೇಕ ಭಕ್ತರು ಆಯೋಧ್ಯೆಗೆ ಹೊರಟು ನಿಂತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಕೇಂದ್ರ ರೈಲ್ವೆ ಇಲಾಖೆ ಅಯೋಧ್ಯೆಯಲ್ಲಿನ ಶ್ರೀ ರಾಮ ಮಂದಿರ ಉದ್ಘಾಟನೆ ವೇಳೆ ಬರುವ ಭಕ್ತಾದಿಗಳಿಗೆ ಸಂಚಾರದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅಗತ್ಯ ಬಿದ್ದಲ್ಲಿ ಹೆಚ್ಚುವರಿಯಾಗಿ ರೈಲ್ವೆ ಸಂಚಾರಕ್ಕೆ ಸಿದ್ಧತೆ ಸಹ ಮಾಡಿಕೊಂಡಿದೆ.
23ರ ಬಳಿಕ ಭಕ್ತರಿಗೆ ರಾಮಮಂದಿರ ಓಪನ್!
ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠೆ ಜ.22ರಂದು ನಡೆಯಲಿದ್ದು ಆದಾದ ಬಳಿಕ ಮಂದಿರ ವೀಕ್ಷಣೆಗೆ ಎಲ್ಲೆಡೆ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂಗಳು ತೆರಳಲಿದ್ದಾರೆ. ಶ್ರೀರಾಮ ಜನ್ಮಭೂಮಿ ಸಹ ಜನವರಿ 23ರ ಬಳಿಕ ರಾಮಮಂದಿರ ಭಕ್ತರಿಗೆ ಮುಕ್ತ ಎಂದು ಘೋಷಿಸಿದೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಅಲ್ಲಿಗೆ ನೇರವಾಗಿ ರೈಲ್ವೆ ಸಂಪರ್ಕ ಕಲ್ಪಿಸುವ ಯೋಚನೆ ಜನಪ್ರತಿನಿಧಿಗಳದ್ದು. ಅದಕ್ಕೆ ತಕ್ಕಂತೆ ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ರೈಲು ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಈ ಹಿಂದೆ ವಾರಣಾಸಿ ಪ್ರವಾಸಕ್ಕೆ ವ್ಯವಸ್ಥೆ ಮಾಡಿದಂತೆಯೇ ಇಲ್ಲೂ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಭಕ್ತರ ಗುಂಪುಗಳನ್ನು ವಿಂಗಡಿಸಿ ಒಬ್ಬರೋ, ಇಬ್ಬರೋ ನಾಯಕರನ್ನಾಗಿ ಮಾಡಿ ಅಯೋಧ್ಯೆ ಪ್ರವಾಸಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ರಾಜ್ಯದಿಂದ ಓಡಾಡಲಿವೆ 12 ರೈಲುಗಳು!
ಸದ್ಯಕ್ಕೆ ಅಯೋಧ್ಯೆ ಯಿಂದ ಬಂದ ಮಂತ್ರಾಕ್ಷತೆಯನ್ನು ಎಲ್ಲ ಭಕ್ತರ ಮನೆಗಳಿಗೆ ಮುಟ್ಟಿಸಲಾಗುತ್ತಿದೆ. ಆದರೆ, ಜ.22ರಂದು ಎಲ್ಲರಿಗೂ ಅಯೋಧ್ಯೆಗೆ ತೆರಳಲು ಅವಕಾಶವಿಲ್ಲ. ಸದ್ಯದ ಮಾಹಿತಿ ಪ್ರಕಾರ ಅತ್ತ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠೆ ಮುಗಿಯುತ್ತಿದ್ದಂತೆ ಇತ್ತ ರೈಲುಗಳ ಸಂಚಾರವೂ ಆರಂಭವಾಗಲಿವೆ. ಹುಬ್ಬಳ್ಳಿಯಿಂದ 7, ಮೈಸೂರುನಿಂದ 2 ಸೇರಿದಂತೆ ಬೇರೆ, ಬೇರೆ ಊರುಗಳಿಂದ ಸುಮಾರು 12ಕ್ಕೂ ಹೆಚ್ಚು ರೈಲುಗಳು ಸಂಚರಿಸುವ ಸಾಧ್ಯತೆ ಇದೆ.
ಒಂದು ರೈಲು ಹೋಗಿ ಬಂದ ಬಳಿಕ ಮತ್ತೊಂದು ರೈಲು ಆ ಊರಿನಿಂದ ಹೊರಡಲಿದೆ. ಅಯೋಧ್ಯೆಯಲ್ಲಿ ರಶ್ ಆಗಬಾರದು ಎಂಬ ಮುಂದಾಲೋಚನೆಯಿಂದ ಈ ರೀತಿಯ ವ್ಯವಸ್ಥೆ ಮಾಡಲಾಗಿದೆ. ಈ ರೈಲುಗಳಿಗೆ ಆನ್‌ಲೈನ್‌ನಲ್ಲಿ ಮುಂಗಡ ಟಿಕೆಟ್ ಬುಕ್ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕೌಂಟರ್ ಟಿಕೆಟ್ ಪಡೆಯಲು ಅವಕಾಶ ಇಲ್ಲ. ಎಷ್ಟು ಟಿಕೆಟ್ ಬುಕ್ ಮಾಡುತ್ತಾರೆ ಎಂಬುದನ್ನು ನೋಡಿಕೊಂಡ ಮೇಲೆಯೇ ರೈಲು ಸಂಚರಿಸಲಿವೆಯಂತೆ. ಐಆರ್‌ಸಿಟಿಸಿಯೇ ಟಿಕೆಟ್ ಬುಕ್ಕಿಂಗ್‌ನ್ನೆಲ್ಲ ನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.