ಹಾವು ತನ್ನ ಹಳೆಯ ಪೊರೆಯನ್ನು ಕಳಚಿ ಹೊಸ ರೂಪ ಪಡೆಯುವುದನ್ನು ನಾವೆಲ್ಲರೂ ಆಶ್ಚರ್ಯದಿಂದ ನೋಡುತ್ತೇವೆ. ಆದರೆ ನಂಬಲಾಗದ ಸತ್ಯವೆಂದರೆ ಮನುಷ್ಯರು ಕೂಡ ಹಾವಿನಂತೆಯೇ ನಿರಂತರವಾಗಿ ತಮ್ಮ ಚರ್ಮವನ್ನು ಬದಲಾಯಿಸುತ್ತಿರುತ್ತಾರೆ. ಮನುಷ್ಯನ ದೇಹದ ಅತ್ಯಂತ ದೊಡ್ಡ ಅಂಗವಾದ ಚರ್ಮವು ಕೇವಲ ರಕ್ಷಣಾ ಕವಚವಲ್ಲದೆ ಸದಾ ಕಾರ್ಯನಿರ್ವಹಿಸುವ ಒಂದು ಅದ್ಭುತ ಕಾರ್ಖಾನೆಯಂತೆ ಕೆಲಸ ಮಾಡುತ್ತದೆ.

ಚರ್ಮದ ಬಗ್ಗೆ ನಿಮಗರಿಯದ ಶಾಕಿಂಗ್ ಸತ್ಯ!:
ವಿಜ್ಞಾನದ ಪ್ರಕಾರ ನಮ್ಮ ಚರ್ಮವು ಪ್ರತಿ ನಿಮಿಷಕ್ಕೆ ಸುಮಾರು 30,000 ರಿಂದ 40,000 ಸತ್ತ ಜೀವಕೋಶಗಳನ್ನು ಹೊರಹಾಕುತ್ತದೆ. ಅಂದರೆ ಪ್ರತಿ ಗಂಟೆಗೆ ನಾವು ಲಕ್ಷಾಂತರ ಹಳೆಯ ಕೋಶಗಳನ್ನು ಕಳೆದುಕೊಳ್ಳುತ್ತೇವೆ. ಹೀಗೆ ಹಳೆಯ ಜೀವಕೋಶಗಳು ಉದುರಿ ಅದರ ಜಾಗದಲ್ಲಿ ಸಂಪೂರ್ಣವಾಗಿ ಹೊಸ ಜೀವಕೋಶಗಳು ಬರಲು ಕೇವಲ 28 ರಿಂದ 30 ದಿನಗಳು ಬೇಕಾಗುತ್ತದೆ. ಇದರರ್ಥವೇನೆಂದರೆ ಪ್ರತಿ ತಿಂಗಳು ನಮ್ಮ ಹಳೆಯ ಚರ್ಮವು ಪೂರ್ತಿಯಾಗಿ ಹೋಗಿ ನಾವು ಸಂಪೂರ್ಣವಾಗಿ ಹೊಸ ಚರ್ಮವನ್ನೇ ಪಡೆದುಕೊಳ್ಳುತ್ತೇವೆ. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸರಿಸುಮಾರು 1,000 ಬಾರಿ ತನ್ನ ಇಡೀ ಚರ್ಮದ ಪದರವನ್ನು ಬದಲಾಯಿಸಿಕೊಳ್ಳುತ್ತಾನೆ.

ನಿಮ್ಮ ದೇಹದ ಬಗ್ಗೆ ಈ ರಹಸ್ಯ ಗೊತ್ತಾ?:
ಆಘಾತಕಾರಿ ವಿಷಯವೆಂದರೆ ನಮ್ಮ ಮನೆಯಲ್ಲಿ ಸಂಗ್ರಹವಾಗುವ ಧೂಳಿನಲ್ಲಿ ಬಹುಪಾಲು ನಮ್ಮದೇ ದೇಹದ ಅಂಶಗಳಿರುತ್ತವೆ. ಸಂಶೋಧನೆಗಳ ಪ್ರಕಾರ ಮನೆಯಲ್ಲಿ ಶೇಖರಣೆಯಾಗುವ ಧೂಳಿನಲ್ಲಿ ಬರೋಬ್ಬರಿ ಶೇಕಡಾ 50 ರಷ್ಟು ನಮ್ಮ ದೇಹದಿಂದ ಉದುರಿದ ಸತ್ತ ಚರ್ಮದ ಜೀವಕೋಶಗಳೇ ಇರುತ್ತವೆ. ಅಂದರೆ ನಾವು ಮನೆಯನ್ನು ಸ್ವಚ್ಛಗೊಳಿಸುವಾಗ ಪರೋಕ್ಷವಾಗಿ ನಮ್ಮ ದೇಹದ ಹಳೆಯ ಅವಶೇಷಗಳನ್ನೇ ಗುಡಿಸುತ್ತಿರುತ್ತೇವೆ. ಪ್ರಕೃತಿಯ ಈ ವಿಸ್ಮಯಕಾರಿ ವ್ಯವಸ್ಥೆಯು ನಮಗೆ ರೋಗಗಳು ಬರದಂತೆ ತಡೆಯಲು ಮತ್ತು ಚರ್ಮದ ಆರೋಗ್ಯವನ್ನು ನಿರಂತರವಾಗಿ ಕಾಪಾಡಲು ಸಹಾಯ ಮಾಡುತ್ತದೆ.


