ಮಂಡ್ಯ: ಸಿದ್ದರಾಮಯ್ಯನವರು ಡಿ.ಕೆ ಶಿವಕುಮಾರ್ ಅವರಿಗೆ ಸೀಟು ಬಿಟ್ಟು ಕೊಡ್ತಾರೆ ಅಂತ ಅನಿಸುತ್ತಿಲ್ಲ.
ದೇವೇಗೌಡರ ಗರಡಿಯಲ್ಲಿ ಪಳಗಿದ ಸಿದ್ದರಾಮಯ್ಯನವರು ಅಭಿವೃದ್ಧಿ ಕೆಲಸ ಕಲಿತಿದ್ರೆ ರಾಜ್ಯಕ್ಕೆ ಒಳ್ಳೆಯದಾಗುತ್ತಿತ್ತು. ಆದರೆ, ಬರೀ ಪಾಲಿಟಿಕ್ಸ್ ಕಲಿತರು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ..
ಮಂಡ್ಯದಲ್ಲಿ ಮಾತನಾಡಿದ ಅವರು, ನ್ಯಾಯಯುತವಾಗಿ ಮುಖ್ಯಮಂತ್ರಿ ಸ್ಥಾನ ಡಿ.ಕೆ. ಶಿವಕುಮಾರ್‌ಗೆ ಸಿಗಬೇಕಿತ್ತು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬಲಹೀನರಾಗಿದ್ದು, ಎಲ್ಲರಿಗೂ ಹೆದರಿಕೊಳ್ಳುವ ಹೈಕಮಾಂಡ್ ಆಗಿದೆ. ಅದಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು ಎಂದು ಹೇಳಿದ್ದಾರೆ.. ಎರಡೂವರೆ ವರ್ಷ ಒಳ್ಳೆಯ ಕೆಲಸ ಮಾಡಿದ್ರೆ, ಸಿದ್ದರಾಮಯ್ಯ ಮುಂದುವರಿಯಲಿ ಅಂತ ಜನರೇ ಧ್ವನಿ ಎತ್ತುತ್ತಿದ್ದರು. ಕೆಟ್ಟ ಆಡಳಿತ ನೀಡಿದರೂ ಸೀಟು ಬಿಟ್ಟು ಕೊಡುವ ಮನಸಿಲ್ಲ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕುಟುಕಿದರು.
ನಾವು ರೈತರ ಪರ ಧ್ವನಿ ಎತ್ತಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ. ರಾಜ್ಯದಾದ್ಯಂತ ವಿಜಯೇಂದ್ರ, ಆರ್.ಅಶೋಕ್ ನೇತೃತ್ವದಲ್ಲಿ ಹೋರಾಟದ ಕಹಳೆ ಮೊಳಗಲಿದೆ ಎಂದರು. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ಹೆಣವನ್ನು ಹೊರುತ್ತಿದ್ದಾರೆ. ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ₹38 ಸಾವಿರ ಕೋಟಿ ಮದ್ಯದಿಂದ ಬರ್ತಿದೆ. ರೈತರಿಗೆ ಯಾಕೆ ಮೋಸ ಮಾಡ್ತಿರಿ. ಭತ್ತ ಖರೀದಿ ಕೇಂದ್ರ ಆರಂಭವಾಗಿಲ್ಲ. ಪಂಚ ಗ್ಯಾರಂಟಿಗಳು ಕೂಡ ಜನರನ್ನು ಸರಿಯಾಗಿ ತಲುಪುತ್ತಿಲ್ಲ. ಸಾಲದ ಹೊರೆ ಹೆಚ್ಚಾಗಿದೆ ಎಂದು ಆರೋಪಿಸಿದರು.


