ಅಸ್ಸಾಂ: ಪತ್ನಿಯಿಂದ ವಿಚ್ಛೇದನ ಪಡೆದ ಪತಿಯೊಬ್ಬ 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿರುವ ಘಟನೆ ಅಸ್ಸಾಂನ ನಲ್ಬರಿ ಜಿಲ್ಲೆಯ ಬಾರ್ಲಿಯಾಪರ್ನಲ್ಲಿ ನಡೆದಿದೆ.
ಮಾಣಿಕ್ ಅಲಿ ಎಂಬಾತ ಹಾಲಿನಿಂದ ಸ್ನಾನ ಮಾಡಿದ ಪತಿರಾಯ. ಸ್ನಾನದ ವಿಡಿಯೋ ಮಾಡಿಕೊಳ್ಳುತ್ತಾ ನಾನು ಈಗ ಸ್ವತಂತ್ರನಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಕಾನೂನಿನ ಮೂಲಕ ಪತ್ನಿಯಿಂದ ವಿಚ್ಛೇದನ ಪಡೆದಿದ್ದೇನೆ. ಶುದ್ಧೀಕರಣ ಹಾಗೂ ಭಾವನಾತ್ಮಕ ಬಿಡುಗಡೆಯ ಸಂಕೇತವಾಗಿ 40 ಲೀಟರ್ ಹಾಲು ತಂದು ಸ್ನಾನ ಮಾಡಿದ್ದೇನೆ ಎಂದು ಮಾಣಿಕ್ ಅಲಿ ಹೇಳಿಕೊಂಡಿದ್ದಾನೆ.
ನನ್ನ ಹೆಂಡತಿ ಪ್ರಿಯಕರನೊಂದಿಗೆ 2 ಬಾರಿ ಓಡಿಹೋಗಿದ್ದಳು. ಆದರೂ ನಾನು ನನ್ನ ಮಗಳ ಬಗ್ಗೆ ಯೋಚಿಸಿ ಆಕೆಯನ್ನು 2 ಬಾರಿ ಕ್ಷಮಿಸಿದ್ದೇನೆ. ಆದ್ರೂ ಅವಳು ಅದೇ ತಪ್ಪನ್ನು ಮಾಡುತ್ತಿದ್ದಾಳೆ. ಅದನ್ನು ಸಹಿಸಲು ಆಗಿಲ್ಲ. ಅಂತಿಮವಾಗಿ ಕಾನೂನುಬದ್ಧವಾಗಿ ಬೇರೆ ಬೇರೆಯಾಗುವ ಮಾರ್ಗ ಆರಿಸಿಕೊಂಡಿದ್ದೇವೆ ಎಂದಿದ್ದಾರೆ.
ಡಿವೋರ್ಸ್ ಸಿಗುತ್ತಿದ್ದಂತೆ ಮಾಲಿಕ್ ಅಲಿ ಅಂಗಡಿಯಿಂದ 40 ಲೀಟರ್ ಹಾಲು ತಂದು ಸ್ನಾನ ಮಾಡಿ ನಾನು ಇಂದಿನಿಂದ ಸಂಪೂರ್ಣ ಸ್ವತಂತ್ರನಾಗಿದ್ದೇನೆ. ನನಗೆ ಇಷ್ಟು ದಿನ ಎಲ್ಲವೂ ಹೊರೆಯಾಗಿತ್ತು. ಈಗ ಅದೆಲ್ಲದರಿಂದ ಮುಕ್ತನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಮಗುವಿನ ಸಲುವಾಗಿ ಪತ್ನಿಯನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದೆ. ಆದ್ರೆ ಪತ್ನಿ ಪ್ರಿಯಕರನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ವಿಚ್ಛೇದನ ಪಡೆಯುವ ಸನ್ನಿವೇಶ ನಿರ್ಮಾಣವಾಗಿದೆ. ಈ ಹಿಂದೆ ಸಾಕಷ್ಟು ಬಾರಿ ಬುದ್ಧಿ ಹೇಳಿ ಮನೆಗೆ ಕರೆದುಕೊಂಡು ಬಂದಿದ್ದು, ಹಿರಿಯರ ಸಮ್ಮಖದಲ್ಲಿ ರಾಜೀ ಪಂಚಾಯಿತಿ ಕೂಡ ಮಾಡಲಾಗಿತ್ತು. ಆದ್ರೂ ಬದಲಾಗದ ಆಕೆ ನನ್ನನ್ನು ತೊರೆದು ಹೋಗಿದ್ದಳು. ಈ ಬಾರಿ ಮಗುವಿನೊಂದಿಗೆ ಪ್ರಿಯಕರನ ಬಳಿಗೆ ಹೋಗಿದ್ದಳು. ಹೀಗಾಗಿ ಕಾನೂನಿನ ಮೂಲಕ ಡಿವೋರ್ಸ್ ಪಡೆದುಕೊಂಡಿದ್ದೇನೆ ಎಂದು ಮಾಣಿಕ್ ಅಲಿ ಹೇಳಿಕೊಂಡಿದ್ದಾನೆ.


