ಕೊಡಗು : ಈ ಸರ್ಕಾರ 5 ವರ್ಷ ಇರಲ್ಲ ಎಂಬ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ಕುಮಾರಸ್ವಾಮಿನೇ 5 ವರ್ಷ ಇರುತ್ತಾರೋ ಇಲ್ವೋ ಯಾರಿಗೆ ಗೊತ್ತು ಸ್ವಾಮಿ ಎಂದು ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.
ಕುಶಾಲನಗರದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯಾರು ಕೊಡಬೇಕು. ನಮಗೆ ಬಹುಮತ ಬಂದಿದೆ ನಾವು ಅಧಿಕಾರ ನಡೆಸ್ತೀವಿ, ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕರಾಗಿ ಒಳ್ಳೆಯ ಕೆಲಸ ಮಾಡಲಿ. ಅದು ಬಿಟ್ಟು ಯಾರು ಇರುತ್ತಾರೆ, ಯಾರು ಇರಲ್ಲ ಅನ್ನೋದು ಜನ ತೀರ್ಮಾನ ಮಾಡುತ್ತಾರೆ ಎಂದು ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಭ್ರೂಣಹತ್ಯೆ ತಡೆಯಲು ಕಟ್ಟುನಿಟ್ಟಿನ ಕ್ರಮ : ದಿನೇಶ್ ಗುಂಡೂರಾವ್
ಮಂಡ್ಯದ ಭ್ರೂಣಹತ್ಯೆ ಮತ್ತು ರಾಜ್ಯದಲ್ಲಿನ ನಕಲಿ ಕ್ಲಿನಿಕ್‌ಗಳ ವಿಚಾರವಾಗಿ ಮಾತನಾಡಿದ ಅವರು, ಭ್ರೂಣಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಈಗಾಗಲೇ ಹಲವರ ಬಂಧನವಾಗಿದೆ ಎಂದರು. ಈ ಬಗ್ಗೆ ಕಾನೂನು ಬದಲಾವಣೆ ತರಲು ಚರ್ಚೆ ನಡೆಸಲಾಗುತ್ತಿದೆ. ಹೊಸಕೋಟೆಯಲ್ಲೂ ಆಸ್ಪತ್ರೆ ಮೇಲೆ ದಾಳಿ ಮಾಡಿ ಬಂಧಿಸಲಾಗಿದೆ. ಇನ್ನೂ ಭ್ರೂಣಹತ್ಯೆ ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ. ನಕಲಿ ವೈದ್ಯರು, ನಕಲಿ ಕ್ಲಿನಿಕ್ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕೇರಳದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ಆರೋಗ್ಯ ಇಲಾಖೆ ಹೈ ಅಲರ್ಟ್
ಕೇರಳದಲ್ಲಿ ಕೋವಿಡ್ ಹರಡುತ್ತಿರುವ ಹಿನ್ನೆಲೆ ಕೊಡಗು ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದಾರೆ. ಕೊಡಗು ಕೇರಳ ಗಡಿ ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಕೇರಳದಿಂದ ಬರುವ ಜನರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಜ್ವರ, ಕೆಮ್ಮು ಶೀತದ ಲಕ್ಷಣಗಳಿದ್ದರೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಕೊಡಗಿನ ಮಾಕುಟ್ಟ, ಕುಟ್ಟ ಹಾಗೂ ಕರಿಕೆ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ ಎಂದು ಕೊಡಗು ಡಿಎಚ್ಓ ಸತೀಶ್ ತಿಳಿಸಿದರು.