ದೆಹಲಿ : ಉಪಮುಖ್ಯಮಂತ್ರಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಟನಲ್ ರಸ್ತೆ ನಿರ್ಮಾಣ, ಮೆಟ್ರೋ ಸಂಪರ್ಕ ವಿಸ್ತರಣೆ, ಭದ್ರಾ ಮೇಲ್ದಂಡೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಯೋಜನೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಅನುಮತಿ ಹಾಗೂ ಹಣಕಾಸಿನ ನೆರವು ಕೋರಿದರು.

ಸಂಸತ್ ಭವನದಲ್ಲಿ ಬುಧವಾರ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಶಿವಕುಮಾರ್ ಅವರು ರಾಜ್ಯದ ಪ್ರಮುಖ ಯೋಜನೆಗಳಿಗೆ ಕೇಂದ್ರದ ಸಹಕಾರ ಕೋರಿದರು.
ಕೇಂದ್ರ ಸಚಿವರಿಗೆ ಉಪಮುಖ್ಯಮಂತ್ರಿಗಳು ನೀಡಿದ ಮನವಿ ಪತ್ರದ ಸಾರಾಂಶ ಹೀಗಿದೆ:
ಬೆಂಗಳೂರಿನ ಮೂರು ಯೋಜನೆಗಳಿಗೆ ನೆರವು :
ಬೆಂಗಳೂರು ಸಂಚಾರ ದಟ್ಟಣೆ ಸಮಸ್ಯೆ ಎದುರಿಸುತ್ತಿದ್ದು, ಈ ಸಮಸ್ಯೆ ಬಗೆಹರಿಸಲು 60 ಕಿ.ಮೀ ಉದ್ದದ ನಗರ ಸುರಂಗ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ನಗರದೊಳಗೆ ಉತ್ತರದಿಂದ ದಕ್ಷಿಣ, ಪೂರ್ವದಿಂದ ಪಶ್ಚಿಮ ಕಾರಿಡಾರ್ ಮೂಲಕ ನಗರದೊಳಗಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮುಂದಾಗಿದ್ದೇವೆ. ಈ ಯೋಜನೆಯಲ್ಲಿ ಪ್ರತಿ ಕಿ.ಮೀ ಸುರಂಗ ರಸ್ತೆಗೆ 500 ಕೋಟಿ ರೂ.ನಂತೆ ಒಟ್ಟು 30 ಸಾವಿರ ಕೋಟಿ ವೆಚ್ಚ ತಗುಲುವ ಅಂದಾಜು ಮಾಡಲಾಗಿದೆ. ಈ ಯೋಜನೆಗಳು ರಾಷ್ಟ್ರೀಯ ಹೆದ್ದಾರಿ 7 ಮತ್ತು 4ರ ಸಂಪರ್ಕ ಸಾಧಿಸುವ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಗೆ ಕೇಂದ್ರ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅನುದಾನ ಮೀಸಲಿಡಬೇಕು.
ಮೆಟ್ರೋ ವಿಸ್ತರಣೆ ಮತ್ತು ಪ್ರವಾಹ ನಿಯಂತ್ರಣಕ್ಕೆ ಮೂಲಸೌಕರ್ಯ ಅಭಿವೃದ್ಧಿ:
ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮೆಟ್ರೋ ಸಂಪರ್ಕ ಮಾರ್ಗವನ್ನು ವಿಸ್ತರಣೆಗೆ ಬಿಎಂಆರ್ ಸಿಎಲ್ ಯೋಜನೆ ರೂಪಿಸುತ್ತಿದ್ದು, ಇದಕ್ಕೆ ಭಾರತ ಸರ್ಕಾರದ ಅನುಮತಿ ಪಡೆಯಲು ನಿಮ್ಮ ಸಹಕಾರ ಬೇಕು. ಇನ್ನು ಅತಿಯಾದ ಮಳೆ ಸಮಯದಲ್ಲಿ ಬೆಂಗಳೂರಿನ ಕೆಲವು ಭಾಗಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಮೂಲಭೂತ ಸೌಕರ್ಯ ಅಭಿವೃದ್ಧಿಗೆ ವಿಶ್ವ ಬ್ಯಾಂಕ್ ನಿಂದ 3 ಸಾವಿರ ಕೋಟಿಯಷ್ಟು ಆರ್ಥಿಕ ನೆರವನ್ನು ಕೋರಿದ್ದು, ಈ ಪ್ರಸ್ತಾವನೆ ಕೇಂದ್ರ ಹಣಕಾಸು ಸಚಿವಾಲಯ ತಲುಪಿದ್ದು ಈ ಪ್ರಸ್ತಾವನೆಗೆ ಅನುಮೋದನೆ ನೀಡಿ ವಿಶ್ವ ಬ್ಯಾಂಕ್ ನಿಂದ ಹಣಕಾಸಿನ ನೆರವು ಬರುವಂತೆ ಮಾಡಬೇಕು.
ಕರ್ನಾಟಕದ ಪೂರ್ವಭಾಗದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿನ ಕೆಲವು ಭಾಗಗಳು ಬರ ಪೀಡಿತವಾಗಿದೆ. ಈ ಭಾಗದ ಜನರಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಈ ಯೋಜನೆಗೆ ಮುಂದಾಗಿದ್ದೇವೆ. ಈ ಯೋಜನೆಗೆ ಒಟ್ಟು ರೂ. 23,251 ಕೋಟಿ ವೆಚ್ಚ ಅಂದಾಜು ಮಾಡಲಾಗಿದ್ದು, ಈವರೆಗೂ ರೂ. 14,698 ಕೋಟಿ ವೆಚ್ಚವಾಗಿದೆ. ಕುಡಿಯುವ ನೀರಿಗೆ ಪ್ರಮುಖ ಆದ್ಯತೆಯಾಗಿದ್ದು, ಕೇಂದ್ರ ಸರ್ಕಾರ ಈ ಯೋಜನೆಗೆ ರೂ. 9177.32 ಕೋಟಿ (ಉಳಿಕೆ ಹಣ) ಅನುದಾನವನ್ನು ನೀಡಬೇಕು ಎಂದು ಮನವಿ ಮಾಡುತ್ತೇವೆ.
ಕೃಷ್ಣಾ ಮೇಲ್ದಂಡೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಮಹದಾಯಿ ಯೋಜನೆಗೆ ಅನುಮತಿ, ಎತ್ತಿನಹೊಳೆ ಯೋಜನೆ ಬೆಂಗಳೂರು ಹಾಗೂ ನೀರಾವರಿ ಯೋಜನೆಗಳಿಗೆ ಅನುಮತಿ, ಹಣಕಾಸಿನ ನೆರವು ಕೋರಿದರು.