ಹಾಸನ: ಹಾಸನಾಂಬೆ ಸಾರ್ವಜನಿಕ ದರ್ಶನದ ಮೊದಲ ದಿನವೇ ಜನ ಜಾತ್ರೆಯೇ ಹರಿದುಬಂದಿದೆ. ಸರ್ವಾಲಂಕಾರ ಭೂಷಿತೆಯಾಗಿರುವ ದೇವಿಯನ್ನು ಕಣ್ತುಂಬಿಕೊಂಡ ಭಕ್ತರು, ಗರ್ಭಗುಡಿಯಲ್ಲಿ ಎಂದೂ ಆರದ ದೀಪವನ್ನು ನೋಡಿ ವಿಸ್ಮಿತರಾದರು. ಗಣ್ಯಾತಿ ಗಣ್ಯರೂ ಶಕ್ತಿದೇವತೆಯ ದರ್ಶನ ಪಡೆದರು.
ದೇಗುಲದ ಬಾಗಿಲು ತೆರೆದು ದೇಗುಲದ ಸ್ವಚ್ಛತೆ, ದೇವಿಗೆ ಅಲಂಕಾರ ಮತ್ತು ನೈವೇದ್ಯ, ಪೂಜೆಗಳ ಬಳಿಕ ಶುಕ್ರವಾರ ಮುಂಜಾನೆ 4 ಗಂಟೆಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಮದ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ಬಂದ ಸಹಸ್ರಾರು ಭಕ್ತರು ದೇವಿಯನ್ನು ಕಣ್ತುಂಬಿಕೊಂಡು ಪುನೀತರಾದರು.
ಶುಕ್ರವಾರವಾದ್ದರಿಂದ ಶಕ್ತಿ ದೇವತೆ ದರ್ಶನಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಹೀಗಾಗಿ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಹಾಸನಾಂಬೆಗೆ ನಮಿಸಿದರು. ಮೊದಲ ದಿನವೇ ಬೆಳ್ಳಂಬೆಳಗ್ಗೆ ಆಗಮಿಸಿದ್ದ ಮೈಸೂರಿನ ರಾಜಮಾತೆ ಶ್ರೀಮತಿ ಪ್ರಮೋದಾ ದೇವಿ, ಶತಾಯುಷಿ ಸಾಲುಮರದ ತಿಮ್ಮಕ್ಕ ಹಾಗೂ ಪರಿಷತ್ ಸದಸ್ಯರಾದ ಬೋಜೇಗೌಡ, ಸೂರಜ್ ರೇವಣ್ಣ ಸೇರಿ ಹಲವರು ದರ್ಶನ ಪಡೆದುಕೊಂಡರು.
ಹಾಸನಾಂಬ ದರ್ಶನ ಸಮಯ
ಈ ವರ್ಷ ಹಾಸನಾಂಬೆ ದರ್ಶನ ಗುರುವಾರದಿಂದ ಆರಂಗೊಂಡಿದ್ದು ಶುಕ್ರವಾರದಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನಿಡಲಾಗಿದೆ. ಶುಕ್ರವಾರ ಬೆಳಗ್ಗೆಯಿಂದ ರಾತ್ರಿ 8 ಗಂಟೆವರೆಗೂ ಭಕ್ತರಿಗೆ ದರ್ಶನಕ್ಕೆ ಅವಕಾಶ ಇದ್ದರೆ ಸಂಜೆ 8 ಗಂಟೆ ಬಳಿಕ ದರ್ಶನ ಕೊನೆಯಾಗಲಿದೆ. ಬಳಿಕ ಮತ್ತೆ ನಾಳೆ ಬೆಳಿಗ್ಗೆ 4 ಗಂಟೆಗೆ ದರ್ಶನ ಆರಂಬವಾದರೆ ನವೆಂಬರ್ 3 ರ ಮುಂಜಾನೆವರೆಗೂ ಕೂಡ ದೇವಿ ದರ್ಶನಕ್ಕೆ ಅವಕಾಶ ಇದೆ. ಈ ವರ್ಷ ರಾಜ್ಯ ಸರ್ಕಾರದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಕಾರಣದಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಅಂದಾಜು 20 ರಿಂದ 25 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯೊಂದಿಗೆ ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದ್ದರೆ, ಮೊದಲ ದಿನವೇ ಹಾಸನಾಂಬೆ ದರ್ಶನಕ್ಕೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದಿದ್ದಾರೆ.
ವೀಕೆಂಡ್ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಸಾವಿರ ರೂ., ಮುನ್ನೂರು ರೂ. ಪಾವತಿಸಿದರೆ ವಿಶೇಷ ದರ್ಶನವಿರುತ್ತದೆ. ಈ ಸಾಲಿನಲ್ಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆಯುತ್ತಿದ್ದಾರೆ.
ಭಕ್ತರ ದರ್ಶನಕ್ಕಾಗಿಬ್ಯಾರಿಕೇಡ್, ನೆರಳು, ನೀರಿನ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತ ಭಕ್ತರಿಗೆ ಏನೂ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಿದೆ. ಶುಕ್ರವಾರ ಕೇವಲ ರಾಜಕೀಯ ನಾಯಕರಲ್ಲದೆ ಸಿನಿತಾರೆಯರಾದ ವಶಿಷ್ಟ ಹಾಗು ಹರಿಪ್ರಿಯ ಸೇರಿ ಹಲವು ಸೆಲೆಬ್ರಿಟಿಗಳು ದೇವಿಯ ದರ್ಶನ ಮಾಡಿದರು. ಬೆಳಿಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ಸರತಿ ಸಾಲುಗಳಲ್ಲಿ ನಿಂತು ದೇವಿಯ ದರ್ಶನ, ಆಶೀರ್ವಾದ ಪಡೆದುಕೊಂಡು ಪುನೀತರಾದರು.