ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಡೆಂಘೀ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ತಿಳಿಸಿದರು.
ನಗರದಲ್ಲಿ ಡೆಂಘೀ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆಯ ಆರೋಗ್ಯ ವಿಭಾಗವು ಜುಲೈ 2024ರಲ್ಲಿ ನಾಗರೀಕರು ಹಾಗೂ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ “ಡೆಂಘೀ ವಾರಿಯರ್” ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇಂದು ಟೌನ್ ಹಾಲ್ ನಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ನಗರದಲ್ಲಿ ಜುಲೈ ತಿಂಗಳಲ್ಲಿ ಹೆಚ್ಚು ಡೆಂಘೀ ಪ್ರಕರಣಗಳು ಕಂಡು ಬರುತ್ತಿದ್ದವು. ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆರೋಗ್ಯ ವಿಭಾಗದ ಎಲ್ಲಾ ಅಧಿಕಾರಿಗಳು ಶ್ರಮಿಸಿರುವ ಪರಿಣಾಮ ಡೆಂಘೀ ನಿಯಂತ್ರಿಸಲು ಸಾಧ್ಯವಾಯಿತೆಂದು ತಿಳಿಸಿದರು.
ಸಾಂಕ್ರಾಮಿಕ ರೋಗಗಳು ಬಂದಾಗ ಸಮುದಾಯವು ಆಡಳಿತದೊಂದಿಗೆ ಕೈಜೋಡಿಸಿದರೆ ತ್ವರಿತಗತಿಯಲ್ಲಿ ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ. ಸಾಮಾಜಿಕ ಜಾಲತಣ ಬಳಸಿಕೊಂಡು ನಾಗರೀಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದಾಗ ಹೆಚ್ಚು ಮಂದಿಗೆ ವಿಷಯ ತಲುಪಲಿದೆ ಎಂದು ಹೇಳಿದರು.
ಡೆಂಘೀ ನಿಯಂತ್ರಣಕ್ಕಾಗಿ ನಾಗರೀಕರು ಅಥವಾ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ, ಯಾವ ರೀತಿ ಇತರರಿಗೆ ಅರಿವು ಮೂಡಿಸಲಾಗಿದೆ ಎಂಬುದರ ಕುರಿತು ಕಿರು ಚಿತ್ರ(ರೀಲ್ಸ್)ಗಳನ್ನು ಮಾಡಿ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲು ತಿಳಿಸಲಾಗಿತ್ತು. ಅದರಂತೆ ಈ ಸ್ಪರ್ಧೆಯಲ್ಲಿ 250ಕ್ಕೂ ಹೆಚ್ಚು ವಾರಿಯರ್ಸ್ ಭಾಗವಹಿಸಿ ಡೆಂಘೀ ಮೂಲ ಗುರುತಿಸುವಿಕೆ, ವರದಿ ಮಾಡುವಿಕೆ ಮತ್ತು ತಡೆಗಟ್ಟುವ ಕುರಿತು ವೀಡಿಯೊಗಳನ್ನು ಮಾಡಿ ಸಾಮಾಜಿಕ ಜಾಲತಣದಲ್ಲಿ ಅಪ್ಲೋಡ್ ಮಾಡಿದ್ದರು ಎಂದು ಹೇಳಿದರು.
ಡೆಂಘೀ ವಾರಿಯರ್ಸ್ ಸಿದ್ದಪಡಿಸಿದ ವೀಡಿಯೊಗಳು 58 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 4 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ವಿವಿಧ ಸಂಸ್ಥೆಗಳಿಂದ ಪ್ರಾಯೋಜಕತ್ವ ಪಡೆದು ಇಂದು ಪ್ರಶಸ್ತಿ ಪುರಸ್ಕಾರ ಮಾಡಲಾಗಿದೆ. ನಾಗರೀಕರು ಹಾಗೂ ವಿದ್ಯಾರ್ಥಿಗಳು ಇದೇ ರೀತಿ ಮುಂದೆ ಬಂದು ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ಪ್ರಾಯೋಜಕತ್ವ ನೀಡಿದವರು:
ಡೆಂಘೀ ವಾರಿಯರ್ಸ್ ಸ್ಪರ್ಧೆಗಾಗಿ ಬೆಸ್ಟ್ ಕ್ಲಸ್ಟರ್, ಎನ್.ಸಿ.ಬಿ.ಎಸ್, ಫೋರಮ್ ಸೌತ್ ಮಾಲ್, ಮಂತ್ರಿ ಸ್ಕ್ವೇರ್, ನೆಕ್ಸಸ್ ಮಾಲ್ ಹಾಗೂ ಮಾಲ್ ಆಫ್ ಏಷ್ಯಾ ಪಾಲಿಕೆ ಜೊತೆ ಕೈ ಜೋಡಿಸಿ ಪ್ರಾಯೋಜಕತ್ವ ನೀಡಿದ್ದು, ವಿಜೇತರಿಗೆ ಗಿಫ್ಟ್ ಓಚರ್ ಗಳನ್ನು ನೀಡಿವೆ.
ಪ್ರಶಸ್ತಿ ವಿಜೇತರ ವಿವರ:
ಡೆಂಘೀ ಕುರಿತು ಮಾಡಿರುವ ರೀಲ್ಸ್ ಗಳಲ್ಲಿ ಹೆಚ್ಚು ಲೈಕ್ಸ್ ಹಾಗೂ ವೀಕ್ಷಣೆ ಮಾಡಿರುವ ವೀಡಿಯೋಗಳ ಅನುಸಾರ ಪ್ರಶಸ್ತಿ ವಿತರಣೆ ಮಾಡಲಾಗುತ್ತಿದೆ. ಆಯ್ಕೆಯಾಗಿರುವ 10 ಮಂದಿಯ ಪೈಕಿ ಮೊದಲ 5 ವಿಜೇತರಿಗೆ ಮೊದಲ ಪ್ರಶಸ್ತಿ ಹಾಗೂ ನಂತರದ 5 ಮಂದಿಗೆ ದ್ವಿತೀಯ ಬಹುಮಾನ ನೀಡಲಾಗಿದೆ. ಅದಲ್ಲದೆ ಹೆಚ್ಚು ಮಕ್ಕಳಿಗೆ ಪ್ರೇರಣೆ ನೀಡಿದ ಶಿಕ್ಷಕಿ ಹಾಗೂ ಉತ್ತಮ ಶಿಕ್ಷಣ ಸಂಸ್ಥೆಯನ್ನು ಗುರುತಿಸಿ ಪ್ರಶಸ್ತಿ ಪುರಸ್ಕರಿಸಲಾಯಿತು.
ಪ್ರಶಸ್ತಿಗಳ ವಿವರ:
ಕ್ರ. ಸಂ – ವಿಜೇತರ ಸಂಖ್ಯೆ ಹಾಗೂ ವರ್ಗ – ಗಿಪ್ಟ್ ಓಚರ್ – ಪ್ರಾಯೋಜಕತ್ವ ನೀಡಿದವರು
1. 05 ರೀಲ್ಸ್ – 25,000(ಒಬ್ಬರಿಗೆ) – ನೆಕ್ಸಸ್ ಮಾಲ್
2. 05 ರೀಲ್ಸ್ – 10,000(ಒಬ್ಬರಿಗೆ) – ಬೆಸ್ಟ್ ಕ್ಲಸ್ಟರ್
3. 01 ಹೆಚ್ಚು ಮಕ್ಕಳಿಗೆ ಪ್ರೇರಣೆ ನೀಡಿದ ಶಿಕ್ಷಕ – 35000 – ಎನ್.ಸಿ.ಬಿ.ಸಿ
4. 01 ಉತ್ತಮ ಶಿಕ್ಷಣ ಸಂಸ್ಥೆ – 1 ಲಕ್ಷ ರೂ. – ಮಾಲ್ ಆಫ್ ಏಷ್ಯಾ ಹಾಗೂ ಮಂತ್ರಿ ಸ್ಕ್ವೇರ್
ಈ ವೇಳೆ ಮುಖ್ಯ ಆರೋಗ್ಯಾಧಿಕಾರಿಯಾದ ಡಾ. ಸೈಯದ್ ಸಿರಾಜುದ್ದೀನ್ ಮದನಿ, ವಲಯ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಲಿಂಕ್ ವರ್ಕರ್ಸ್ ಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.