ಸುದ್ದಿಹಣಕಾಸು

ಲೈಸೆನ್ಸ್‌ಗೆ ಲಂಚದ ಬೇಡಿಕೆ;ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಅಧಿಕಾರಿ!

ಹುಬ್ಬಳ್ಳಿ-ಧಾರವಾಡ: ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರದ ಮತ್ತೊಂದು ಮುಖ ಬಯಲಾಗಿದ್ದು, ಸಾಮಾನ್ಯ ರೊಟ್ಟಿ ಅಂಗಡಿಗೆ ಪರವಾನಗಿ ನೀಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಮಹಿಳಾ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹು-ಧಾ ಪಾಲಿಕೆಯ ವಲಯ 1ರ ಕಚೇರಿಯಲ್ಲಿ ಅಧಿಕಾರಿಯಾಗಿದ್ದ ಹೀನಾ ಕೌಸರ್, ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಮಾಳೆಪ್ಪ ತಳವಾರ ಎಂಬುವವರು ತಮ್ಮ ರೊಟ್ಟಿ ಅಂಗಡಿಗೆ ಲೈಸೆನ್ಸ್ ಪಡೆಯಲು ಕಚೇರಿಗೆ ಅಲೆದಾಡುತ್ತಿದ್ದರು. ಈ ಕೆಲಸ ಮಾಡಿಕೊಡಲು ಹೀನಾ ಕೌಸರ್ ಒಟ್ಟು 4500 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಬಡ ವ್ಯಾಪಾರಿಯೊಬ್ಬರಿಂದ ಲಂಚಕ್ಕೆ ಕೈಯೊಡ್ಡಿದ ಈ ಅಧಿಕಾರಿ, ಈಗಾಗಲೇ 1000 ರೂಪಾಯಿಗಳನ್ನು ಮುಂಗಡವಾಗಿ ಪಡೆದಿದ್ದರು. ಉಳಿದ 3500 ರೂಪಾಯಿಗಳನ್ನು ನೀಡದ ಹೊರತು ಕೆಲಸ ಮಾಡಿಕೊಡಲು ನಿರಾಕರಿಸಿದ್ದರು.

ಲಂಚದ ಕಿರುಕುಳದಿಂದ ಬೇಸತ್ತ ಮಾಳೆಪ್ಪ ಅವರು ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದರು. ಅವರ ಮಾರ್ಗದರ್ಶನದಂತೆ ಇಂದು ಬಾಕಿ ಮೊತ್ತದ 3500 ರೂಪಾಯಿಗಳನ್ನು ನೀಡುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಮಿಂಚಿನ ದಾಳಿ ನಡೆಸಿ, ಹಣದ ಸಮೇತ ಹೀನಾ ಕೌಸರ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಲಂಚದ ಹಣ ವಶಪಡಿಸಿಕೊಂಡಿರುವ ಅಧಿಕಾರಿಗಳು ಭ್ರಷ್ಟ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments (0)

Your email address will not be published. Required fields are marked *

Back to top button