ಬೆಂಗಳೂರು: ಚೀಟಿ ವ್ಯವಹಾರದಲ್ಲಿ ವಂಚನೆ ಪ್ರಕರಣದಿಂದ ಆರೋಪಿಗಳನ್ನು ಕೈಬಿಡಲು ₹5 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪ್ರಕರಣ ಸಂಬಂಧ ಆರೋಪಿಗಳ ಬಂಧನಕ್ಕೆ ತೆರಳಿದ್ದ ವೇಳೆ ಆರೋಪಿಗಳು ಪ್ರತಿರೋಧ ತೋರಿದ್ದು, ನೋಟಿಸ್ ನೀಡದೇ ಬಂದಿದ್ದೀರಿ ಹಾಗೂ ಲಾಯರ್ ಜೊತೆ ಮಾತನಾಡಬೇಕು ಎಂದು ಪಟ್ಟುಹಿಡಿದಿದ್ದರು. ಈ ವೇಳೆ ನಡೆದ ಸಂಪೂರ್ಣ ಘಟನೆಯು ಸಿಸಿಟಿವಿ ಮತ್ತು ಮೊಬೈಲ್ ವೀಡಿಯೋಗಳಲ್ಲಿ ದಾಖಲಾಗಿದೆ.
ಪೊಲೀಸರು ಆರೋಪಿಗಳನ್ನು ಹೊಯ್ಸಳ ವಾಹನದ ಮೂಲಕ ಠಾಣೆಗೆ ಕರೆತಂದಿದ್ದರು. ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಗೋವಿಂದರಾಜು ಪ್ರಕರಣದಿಂದ ಕೈಬಿಡುವ ಭರವಸೆಯೊಂದಿಗೆ ₹5 ಲಕ್ಷ ನೀಡುವಂತೆ ಬೇಡಿಕೆ ಇಟ್ಟು, ಮೊದಲ ಹಂತದಲ್ಲಿ ₹1 ಲಕ್ಷ ಹಣ ಪಡೆದಿದ್ದರು. ಉಳಿದ ₹4 ಲಕ್ಷ ಹಣವನ್ನು ತರಲು ಸೂಚಿಸಿದ್ದು, ಮೈಸೂರು ರಸ್ತೆ ಸಿಎಆರ್ ಗ್ರೌಂಡ್ ಬಳಿ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿ ಅವರನ್ನು ಬಂಧಿಸಿದ್ದಾರೆ.
ಪ್ರಸ್ತುತ ಇನ್‌ಸ್ಪೆಕ್ಟರ್ ಗೋವಿಂದರಾಜು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಪೊಲೀಸರ ಬಂಧನ ಕಾರ್ಯಾಚರಣೆ ಹಾಗೂ ಸಂಭಾಷಣೆಯ ದೃಶ್ಯ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿವೆ.


