ಬೆಂಗಳೂರು: ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣವನ್ನ ಮುಚ್ಚಿಹಾಕೋಕೆ ಕಾಂಗ್ರೆಸ್ ಅತಿದೊಡ್ಡ ಷಡ್ಯಂತ್ರವನ್ನೇ ಮಾಡಿದೆ. ಜೈಲಿನಲ್ಲಿ ದರ್ಶನ್ಗೆ ರಾಜ್ಯಾತಿಥ್ಯದ ಫೋಟೋ ಹೊರಬಿಟ್ಟಿದ್ದೇ ರಾಜ್ಯ ಸರ್ಕಾರ ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ, ಸದ್ಯ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಜೋಶಿ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದು, ದರ್ಶನ್ ವಿಚಾರ ಹಾಗೂ ಮುಡಾ ಆರೋಪದ ವಿಚಾರ ಬಿಡಿ. ಮಹದಾಯಿ ಯೋಜನೆ ಜಾರಿ ಮಾಡಲು ಅನುಮತಿ ಕೊಡಿಸ್ರಪ್ಪ ಎಂದಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮಹದಾಯಿ ಯೋಜನೆ ಜಾರಿ ಮಾಡಲು ದುಡ್ಡು ಕೊಡಿಸ್ರಪ್ಪ. ಗಣೇಶ ಚತುರ್ಥಿ ಹಬ್ಬದ ದಿನವೇ ವಿಘ್ನ ನಿವಾರಣೆ ಆಗಲಿ. ಇಲ್ಲಿಂದಲೇ ದೀರ್ಘದಂಡ ನಮಸ್ಕಾರ ಹಾಕುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ವಿಷಯ ಡೈವರ್ಟ್ ಮಾಡೋದಿದ್ರೆ ಅವರ ನಾಯಕರ ಸಿಡಿ ಇತ್ತಲ್ಲ? ಇಂಜೆಕ್ಷನ್ ಆರ್ಡರ್ ತೆಗೆದುಕೊಂಡಿದ್ದಾರಲ್ಲಾ, ಯಾರು ಮಾಡಿಸಿದ್ದು? ಜೋಶಿ ರಾಜ್ಯದ ವಿಚಾರವಾಗಿ ಮಾತನಾಡಿದ್ದನ್ನು ನಾನು ನೋಡಿಲ್ಲ. ಮಹದಾಯಿ ವಿಚಾರದಲ್ಲಿ ನಮಗೆ ಇನ್ನೂ ಅನುಮತಿಯೇ ಸಿಕ್ಕಿಲ್ಲ. ಆ ಬಗ್ಗೆ ಯಾವತ್ತಾದ್ರೂ ಕೇಂದ್ರ ಸಚಿವ ಜೋಶಿ ಮಾತನಾಡುತ್ತಾರಾ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.