
ಬೆಂಗಳೂರು: ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಜೀವನದಲ್ಲಿ ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ತಾವು ವರಿಸುವ ವಧುವಿನ ಕುರಿತು ಫೋಟೋ ಜೊತೆಗೆ ಮಾಹಿತಿ ಹಂಚಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಎರಡು ಕಡೆಯ ಕುಟುಂಬಸ್ಥರ ಸಮ್ಮುಖದಲ್ಲಿ ಲಗ್ನಪತ್ರಿಕೆ ಬರೆಸುವ ಶಾಸ್ತ್ರ ಹಾಗೂ ನಿಶ್ಚಿತಾರ್ಥ ಸಂಭ್ರಮ ಮಾಡಿಕೊಂಡಿದ್ದಾರೆ.

ಅರಸಿಕೆರೆ ತಾಲೂಕು ಕಾಳೇನಹಳ್ಳಿಯಲ್ಲಿರುವ ಧನಂಜಯ್ ನಿವಾಸದಲ್ಲಿ ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ಫೆ.16ಕ್ಕೆ ಇವರಿಬ್ಬರ ಮದುವೆ ಕಾರ್ಯಕ್ರಮ ನಿಗದಿಯಾಗಿದೆ.

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಡಾಲಿ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದರು.

ಭಾವಿ ಪತ್ನಿ ಗೈನೋಕಾಲಾಜಿಸ್ಟ್ ಆಗಿರುವ ಧನ್ಯತಾ ಜೊತೆಗಿನ ಸುಂದರವಾದ ವಿಡಿಯೋ ಹಂಚಿಕೊಳ್ಳುವ ಮೂಲಕ ಮದುವೆ ಸುದ್ದಿಯನ್ನು ಹಂಚಿಕೊಂಡಿದ್ದರು.

ಇದನ್ನೆಲ್ಲ ಕೇಳಿಸಿಕೊಂಡು ಸುಮ್ಮನಿದ್ದ ಧನಂಜಯ್ ಅವರು ಒಂದೇ ಬಾರಿಗೆ ಭಾವಿ ಪತ್ನಿ ಜೊತೆಗೆ ಫೋಟೋ ಶೂಟ್ ಮಾಡಿಸಿ ಎಲ್ಲರಿಗೂ ಬಿಗ್ ಶಾಕ್ ಕೊಟ್ಟಿದ್ದರು. ಧನ್ಯತಾ ಅವರನ್ನು ವಿವಾಹ ಆಗಲಿದ್ದಾರೆ. ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ನಲ್ಲಿ 2025ರ ಫೆಬ್ರವರಿ 16 ರಂದು ಧನಂಜಯ್ ಹಾಗೂ ಧನ್ಯತಾ ಅವರು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ಧನಂಜಯ್ ಅವರ ಮದುವೆ ಸುದ್ದಿಯಿಂದ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.





