ಮೈಸೂರು: ಹೈಕಮಾಂಡ್ ತೀರ್ಮಾನ ಮಾಡದೇ ಬೇರೆ ಯಾರೇ ಏನೇ ಮಾತನಾಡಿದರೂ ಅದಕ್ಕೆ ಕಿಮ್ಮತ್ತಿಲ್ಲ. ಜನರ ಅಭಿಪ್ರಾಯ ಏನೇ ಇದ್ದರೂ ಹೈಕಮಾಂಡ್ ನಿರ್ಧಾರವೇ ಅಂತಿಮ. ಹೈಕಮಾಂಡ್ ಬಿಟ್ಟು ಬೇರೆ ಯಾರೇ ಮಾತನಾಡಿದರೂ ಕಿಮ್ಮತ್ತಿಲ್ಲ, ಬಿಹಾರ ಚುನಾವಣೆಯ ನಂತರ ರಾಜ್ಯದಲ್ಲಿ ಸಂಪುಟ ಪುನಾರಚನೆಯ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಬಿಹಾರ ಮೂಲದ ಮುಖಂಡರು ಹೇಳಿರುವ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.. ಹೈಕಮಾಂಡ್ ತೀರ್ಮಾನ ಮಾಡದೇ ಬೇರೆ ಯಾರೇ ಏನೇ ಮಾತನಾಡಿದರೂ ಅದಕ್ಕೆ ಕಿಮ್ಮತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜನರು ಏನನ್ನಾದರೂ ಮಾತನಾಡುತ್ತಾರೆ. ಹೈಕಮಾಂಡ್ ಹೇಳಬೇಕಲ್ಲವೇ? ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನಮ್ಮ ಹೈಕಮಾಂಡ್. ಅವರೇನಾದರೂ ಹೇಳಿದ್ದಾರೆಯೇ? ಜನರು ಮಾತನಾಡುವುದಕ್ಕಿಂತ ಮಾಧ್ಯಮದಲ್ಲೇ ಜಾಸ್ತಿ ಚರ್ಚೆ ಆಗುತ್ತಿದೆ ಎಂದು ಹೇಳಿದರು.
ಸಚಿವ ಸಂಪುಟ ಪುನರಚನೆ ಬಗ್ಗೆ ಬಿಹಾರ ಚುನಾವಣೆ ಮುಗಿದ ನಂತರ, ನವದೆಹಲಿಗೆ ಹೋಗಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸುತ್ತೇನೆ. ನ.15ಕ್ಕೆ ದೆಹಲಿಗೆ ಹೋಗುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಸರಗೂರು ತಾಲ್ಲೂಕಿನಲ್ಲಿ ಹುಲಿ ದಾಳಿಯಿಂದ ಇಬ್ಬರು ರೈತರು ಮೃತರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೈಸೂರಿನ ಅರಣ್ಯ ಪ್ರದೇಶಗಳಲ್ಲಿ ಸಫಾರಿ ಚಟುವಟಿಕೆಗಳನ್ನು ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಅರಣ್ಯ ವಲಯಗಳಲ್ಲಿ ಹೆಚ್ಚುತ್ತಿರುವ ಮಾನವ ಚಟುವಟಿಕೆಯಿಂದಾಗಿ ನೀರು ಮತ್ತು ಆಹಾರವನ್ನು ಅರಸಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ಅವರು ಹೇಳಿದರು. ಅರಣ್ಯ ಪ್ರದೇಶದಲ್ಲಿ ಜನರ ಓಡಾಟ ಹೆಚ್ಚಾಗಿದೆ ಮತ್ತು ರೆಸಾರ್ಟ್‌ಗಳು ಬರುತ್ತಿವೆ. ಇದಲ್ಲದೆ, ಸಫಾರಿ ಚಟುವಟಿಕೆಗಳು ಹೆಚ್ಚಿವೆ- ಅದು ಒಂದು ಕಾರಣ. ಹೀಗಾಗಿ, ಕಾಡು ಪ್ರಾಣಿಗಳು ನೀರು ಮತ್ತು ಆಹಾರವನ್ನು ಅರಸಿ ಹಳ್ಳಿಗಳಿಗೆ ಬರುತ್ತಿವೆ ಎಂದು ಸಿದ್ದರಾಮಯ್ಯ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ನಿನ್ನೆ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆದಿತ್ತು. ಶೀಘ್ರದಲ್ಲೇ ಮತ್ತೊಮ್ಮೆ ಸಭೆ ನಡೆಸುತ್ತೇನೆ. ಅಕ್ರಮ ರೆಸಾರ್ಟ್‌ಗಳ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಮತ್ತು ಕಾಡಿನಲ್ಲಿ ಸಫಾರಿ ಚಟುವಟಿಕೆಗಳನ್ನು ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು.


