ಜಿಲ್ಲೆಸುದ್ದಿ

ಗ್ಯಾಸ್ ಅಭಾವದ ನಡುವೆ ಸಿಲಿಂಡರ್ ಕಳ್ಳರ ಎಂಟ್ರಿ!

ಚನ್ನಪಟ್ಟಣ: ಒಂದೆಡೆ ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಜನಸಾಮಾನ್ಯರು ಕಂಗಾಲಾಗಿದ್ದರೆ, ಇನ್ನೊಂದೆಡೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು ಮನೆಗಳ ಮುಂದೆ ಇಟ್ಟಿರುವ ಸಿಲಿಂಡರ್‌ಗಳನ್ನು ಎಗರಿಸುತ್ತಿದ್ದಾರೆ. ಚನ್ನಪಟ್ಟಣದ ಕನಕನಗರದ ನಿವಾಸಿ ಕೃಷ್ಣಪ್ಪ ಎಂಬುವವರ ಮನೆಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಮನೆಯ ಕಾಂಪೌಂಡ್ ಒಳಗೆ ಇಟ್ಟಿದ್ದ ತುಂಬಿದ ಗ್ಯಾಸ್ ಸಿಲಿಂಡರ್ ಅನ್ನು ಕಳ್ಳನೊಬ್ಬ ಹಾಡಹಗಲೇ ಹೊತ್ತೊಯ್ದಿದ್ದಾನೆ.

ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಸಂಚು ರೂಪಿಸಿದ್ದ ಖದೀಮ, ಕಾಂಪೌಂಡ್ ಒಳಗೆ ನುಗ್ಗಿ ತುಂಬಿದ ಸಿಲಿಂಡರ್ ಅನ್ನು ಅತ್ಯಂತ ಸಲೀಸಾಗಿ ಎತ್ತಿಕೊಂಡು ಪರಾರಿಯಾಗಿದ್ದಾನೆ. ಕಳ್ಳತನದ ಈ ಸಂಪೂರ್ಣ ದೃಶ್ಯವು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಲಿಂಡರ್ ಅಭಾವದಿಂದಾಗಿ ಹಳೆ ಸಿಲಿಂಡರ್ ಸಿಗುವುದೇ ಕಷ್ಟವಾಗಿರುವ ಈ ಸಂದರ್ಭದಲ್ಲಿ, ತುಂಬಿದ ಸಿಲಿಂಡರ್ ಕಳೆದುಕೊಂಡ ಮನೆಯ ಮಾಲೀಕರು ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.

ರಾಜ್ಯಾದ್ಯಂತ ಗ್ಯಾಸ್ ಸಿಲಿಂಡರ್‌ಗಳಿಗಾಗಿ ಆಟೋ ಚಾಲಕರು ಮತ್ತು ಗೃಹಿಣಿಯರು ಬಂಕ್‌ಗಳ ಮುಂದೆ ಕ್ಯೂ ನಿಲ್ಲುತ್ತಿರುವಾಗ, ಚನ್ನಪಟ್ಟಣದಲ್ಲಿ ನಡೆದಿರುವ ಈ ಕಳ್ಳತನದ ಘಟನೆ ನಿವಾಸಿಗಳಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಈ ಸಂಬಂಧ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದಾರೆ. ಜನರು ತಮ್ಮ ಮನೆಯ ಸಿಲಿಂಡರ್‌ಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.

Comments (0)

Your email address will not be published. Required fields are marked *

Back to top button