ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವತ್ತು ಬಜೆಟ್ ಮಂಡಿಸಲಿದ್ದಾರೆ. ದೇಶದ ಜನರು ಸಾಕಷ್ಟು ಗುಡ್ನ್ಯೂಸ್ಗಳ ನಿರೀಕ್ಷೆಯಲ್ಲಿದ್ರೆ, ಬೆಳ್ಳಂಬೆಳಗ್ಗೆ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಸಿಲಿಂಡರ್ ಬೆಲೆಯನ್ನು 14 ರೂಪಾಯಿ ಏರಿಸಿ ತೈಲ ಕಂಪನಿಗಳು ಆಘಾತ ನೀಡಿವೆ.ವಾಣಿಜ್ಯ ಬಳಕೆಯ 19 ಕೆಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ಏರಿಕೆಯಾಗಿದ್ದು, ಪರಿಷ್ಕೃತ ದರವು ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಿದೆ. ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ 1760.50 ರೂಪಾಯಿಗೆ ಏರಿಕೆ ಆಗಿದೆ.
ಯಾವ ನಗರದಲ್ಲಿ ಎಷ್ಟು ದರ?
ಬೆಲೆ ಹೆಚ್ಚಳದ ಬಳಿಕ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1769.50 ರೂ. ತಲುಪಿದೆ. ಕೋಲ್ಕತ್ತಾದಲ್ಲಿ 19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1887.00 ರೂ.ಗೆ ತಲುಪಿದೆ. ಮುಂಬೈನಲ್ಲಿ 1723.50 ರೂ., ಚೆನ್ನೈನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1937 ರೂ.ಗೆ ತಲುಪಿದೆ.ಕಳೆದ ಮೂರು ವರ್ಷಗಳಲ್ಲಿ ಗೃಹಬಳಕೆಯ ಸಿಲಿಂಡರ್ ಗಳ ದರ 17 ಬಾರಿ ಬದಲಾಗಿದ್ದು, ವಾಣಿಜ್ಯ ಸಿಲಿಂಡರ್ಗಳ ದರ ಬಹುತೇಕ ಪ್ರತಿ ತಿಂಗಳು ಬದಲಾಗುತ್ತಿದೆ. ಈ ಬದಲಾವಣೆಗಳಿಂದಾಗಿ, ಕೆಲವೊಮ್ಮೆ ಗ್ರಾಹಕರಿಗೆ ಪ್ರಯೋಜನವಾದರೆ ಇನ್ನು ಕೆಲವೊಮ್ಮೆ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಐಒಸಿ ಅಂಕಿಅಂಶಗಳ ಪ್ರಕಾರ, ಜನವರಿ 1, 2021 ರಂದು ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,349 ರೂ ಇತ್ತು. ಅಂದಿನಿಂದ ಸುಮಾರು 50 ಬಾರಿ ದರ ಪರಿಷ್ಕರಣೆಯಾಗಿದೆ.