ಬೆಂಗಳೂರು: ಐಪಿಎಲ್ 18ನೇ ಆವೃತ್ತಿ ಪ್ರಾರಂಭವಾಗಿ ನಾಲ್ಕು ದಿನ ಕಳೆದಿದ್ದು, ಈಗಾಗಲೇ 4 ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ.
2025ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಮುಖಾಮುಖಿ ಆಗಿದ್ದವು. ಈ ರೋಚಕ ಪಂದ್ಯದಲ್ಲಿ ಆರ್‌ಸಿಬಿ ಆಲ್ರೌಂಡರ್ ಪ್ರದರ್ಶನ ನೀಡಿ ಗೆಲುವು ಸಾಧಿಸಿತು.
ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ತನ್ನ ಮೊದಲನೇ ಪಂದ್ಯದಲ್ಲಿ ಜಯಭೇರಿ ಸಾಧಿಸಿದೆ. ಇದೀಗ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು (ಶುಕ್ರವಾರ) 28-03-2025ರಂದು ಎಂ. ಎ ಚಿದಂಬರಂ ಮೈದಾನದಲ್ಲಿ ಮುಖಾಮುಖಿಯಾಗಲು ಎಲ್ಲಾ ಸಿದ್ಧತೆಗಳು ನಡೆಸಿಕೊಳ್ಳುತ್ತಿದೆ. ಒಂದೆಡೆ ಆರ್ಸಿಬಿ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಸಿದ್ಧತೆ ನಡೆಸಿವೆ. ಮತ್ತೊಂದೆಡೆ ಕಳೆದ ಆವೃತ್ತಿಯಲ್ಲಿ ಸಿಎಸ್ಕೆ ತಂಡವನ್ನು ಮಣಿಸಿ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದ್ದ ಆರ್ಸಿಬಿ ತಂಡದ ವಿರುದ್ಧ ಈಬಾರಿ ಸೇಡು ತೀರಿಸಿಕೊಳ್ಳಲು ಚೆನ್ನೈ ತಂಡ ಮುಂದಾಗಿದೆ. ಇದಕ್ಕೆ ಬೇಕಾದ ಮಾಸ್ಟರ್ ಪ್ಲಾನ್ ಕೂಡ ಮಾಡಿಕೊಂಡಿದೆ.
CSK ಮಾಸ್ಟರ್ ಪ್ಲಾನ್ ಏನು: ಆರ್ಸಿಬಿ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಮತೋಲನದಿಂದ ಕೂಡಿದ್ದು, ಅದರಲ್ಲೂ ಬ್ಯಾಟಿಂಗ್ ಲೈನ್ಅಪ್ ಹೆಚ್ಚು ಬಲಿಷ್ಠವಾಗಿದೆ. ಆರಂಭಿಕ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ರನ್ನು ಬ್ಯಾಟಿಂಗ್‌ನಲ್ಲಿ ತಡೆಯದಿದ್ದರೆ ಸಿಎಸ್‌ಕೆ ದೊಡ್ಡ ಮೊತ್ತದ ಸ್ಕೋರನ್ನು ಎದುರಿಸಬೇಕಾಗುತ್ತದೆ ಎಂದು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸಾಬೀತಾಗಿದೆ. ಇದಕ್ಕೆ ಕಡಿವಾಣ ಹಾಕಲು ಸಿಎಸ್ಕೆ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.
CSK ಟಾರ್ಗೆಟ್ ಯಾರು?: ಆರ್ಸಿಬಿ ಪರ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಅಬ್ಬರಿಸಿದ್ರೆ ಆರ್‌ಸಿಬಿ ಆಯಾಸವಿಲ್ಲದೆ ಪಂದ್ಯ ಗೆಲ್ಲುತ್ತದೆ ಎಂಬುದು ಸಿಎಸ್‌ಕೆಗೆ ತಿಳಿದಿದೆ. ಹಾಗಾಗಿ ಈ ಇಬ್ಬರನ್ನು ಆದಷ್ಟು ಬೇಗ ಔಟ್ ಮಾಡಲು ಚೆನ್ನೈ ತಂಡ ಸಕಲ ಸಿದ್ಧತೆ ನಡೆಸಿದೆ. ಅದರಲ್ಲೂ ರನ್ ಮಷೀನ್ ವಿರಾಟ್ ಕೊಹ್ಲಿ ಸಿಎಸ್ಕೆಗೆ ಪ್ರಮುಖ ಟಾರ್ಗೆಟ್ ಆಗಿದ್ದಾರೆ. ಏಕೆಂದರೆ ಕೊಹ್ಲಿ ಒಮ್ಮೆ ಕ್ರೀಸ್ನಲ್ಲಿ ತಮ್ಮ ವಿರಾಟ ರೂಪವನ್ನು ತಾಳಿದರತೆ, ಎದುರಿಗೆ ಅದೆಂತಹ ಶ್ರೇಷ್ಠ ಬೌಲರ್ ಇದ್ದರೂ ಅವರಿಗೆ ಬೆವರಿಳಿಸುತ್ತಾರೆ. ಹಾಗಾಗಿ ಪವರ್ ಪ್ಲೇ ಒಳಗಡೆ ವಿರಾಟ್ ವಿಕೆಟ್ ಪಡೆಯಲು ಚೆನ್ನೈ ತಂಡ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.
ಒಂದು ವೇಳೆ ಕೊಹ್ಲಿ ವಿಕೆಟ್ ಬಿದ್ದರೆ ಆರ್‌ಸಿಬಿ ತಂಡದ ಮೇಲೆ ಒತ್ತಡ ಹೆಚ್ಚಾಗುವುದರ ಜೊತೆಗೆ ವೇಗದ ಸ್ಕೋರ್ಗೂ ಬ್ರೇಕ್ ಬೀಳಲಿದೆ. ಈ ಹಿನ್ನೆಲೆ ಚೆನ್ನೈ ತಂಡದ ಪ್ರಮುಖ ಟಾರ್ಗೆಟ್ ವಿರಾಟ್ ಕೊಹ್ಲಿಯೇ ಆಗಿದ್ದಾರೆ.