ಸಿನಿಮಾಸುದ್ದಿ

‘ಬಾಸ್’ ಚಿತ್ರಕ್ಕೆ ಕೋರ್ಟ್ ತಡೆಯಾಜ್ಞೆ..!

ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು, ರೇಣುಕಾಸ್ವಾಮಿ ಕೊಲೆ ಪ್ರಕರಣ ಆಧಾರಿತ ಎನ್ನಲಾದ ‘ಬಾಸ್’ ಸಿನಿಮಾ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಏಪ್ರಿಲ್ 14, 2026 ರಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿದ್ದ ಈ ಚಿತ್ರವು, ಪ್ರಸ್ತುತ ನ್ಯಾಯಾಲಯದ ವಿಚಾರಣಾ ಹಂತದಲ್ಲಿರುವ ಕೊಲೆ ಪ್ರಕರಣದ ಅಂಶಗಳನ್ನು ಒಳಗೊಂಡಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕರು, ನಿರ್ದೇಶಕರು ಮತ್ತು ವಿತರಕರು ಯಾವುದೇ ರೂಪದಲ್ಲಿ ಅಂದರೆ ಚಿತ್ರಮಂದಿರ ಅಥವಾ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಿನಿಮಾವನ್ನು ಪ್ರದರ್ಶಿಸಬಾರದು ಎಂದು ನ್ಯಾಯಾಧೀಶರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಸಿದ 16ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು, ದಾವೆದಾರರ ಜೀವನಕ್ಕೆ ಸಂಬಂಧಿಸಿದ ಉಲ್ಲೇಖಗಳು ಅಥವಾ ಅವರ ಗೌರವಕ್ಕೆ ಧಕ್ಕೆ ತರುವಂತಹ ಅಂಶಗಳು ಚಿತ್ರದಲ್ಲಿ ಇರಬಾರದು ಎಂದು ಅಭಿಪ್ರಾಯಪಟ್ಟಿದೆ. ಒಂದು ವೇಳೆ ಚಿತ್ರ ಬಿಡುಗಡೆಯಾದರೆ ಅದು ನ್ಯಾಯಾಲಯದಲ್ಲಿ ನಡೆಯುತ್ತಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯ ಮೇಲೆ ಪ್ರಭಾವ ಬೀರಬಹುದು ಮತ್ತು ಆರೋಪಿಗಳ ಘನತೆಗೆ ತೇಜೋವಧೆ ಉಂಟಾಗಬಹುದು ಎಂಬ ದರ್ಶನ್ ದಂಪತಿಯ ವಾದವನ್ನು ನ್ಯಾಯಾಲಯ ಪರಿಗಣಿಸಿದೆ. ಈ ಆದೇಶದ ಬೆನ್ನಲ್ಲೇ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಸಮನ್ಸ್ ಜಾರಿಗೊಳಿಸಲಾಗಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಲಾಗಿದೆ. ಇದರಿಂದಾಗಿ ಚಿತ್ರತಂಡಕ್ಕೆ ಭಾರಿ ಹಿನ್ನಡೆಯಾಗಿದ್ದು, ಚಿತ್ರದ ಭವಿಷ್ಯ ಈಗ ನ್ಯಾಯಾಲಯದ ಅಂತಿಮ ತೀರ್ಪಿನ ಮೇಲೆ ಅವಲಂಬಿತವಾಗಿದೆ.

Comments (0)

Your email address will not be published. Required fields are marked *

Back to top button