ಬೆಂಗಳೂರು: ಯಕ್ಷಗಾನ ಕಲಾವಿದರು ಬಹುಪಾಲು ಸಲಿಂಗಿಗಗಳು ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಇದೀಗ ಕ್ಷಮೆಯಾಚಿಸಿದ್ದಾರೆ.. ನನ್ನ ಹೇಳಿಕೆಯಿಂದ ಕಲಾವಿದರಿಗೆ ನೋವಾದಲ್ಲಿ ಕ್ಷಮೆ ಯಾಚನೆ ಮಾಡುತ್ತೇನೆ ಎಂದಿದ್ದಾರೆ.
ಎಲ್ಲರೂ ಅಲ್ಲ ಕೆಲವು ಕಲಾವಿದರು ಸಲಿಂಗಿಗಳು ಹೌದು. ಆ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ಹಿಂದೆ ನವೆಂಬರ್ ನಲ್ಲಿ ಆರಂಭವಾದ ತಿರುಗಾಟ ಮೇ ಕೊನೆಯಲ್ಲಿ ಮುಕ್ತಾಯವಾಗುತ್ತಿತ್ತು. ಕಲಾವಿದರಿಗೆ ಮನೆಯ ಸಂಪರ್ಕ ಕಷ್ಟವಾಗುತ್ತಿತ್ತು. ಯಕ್ಷಗಾನ ಕಲೆ ಈಗ ಹಿಂದಿನಂತಿಲ್ಲ, ಕಲಾವಿದರಿಗೆ ಅನೇಕ ಸೌಲಭ್ಯಗಳಿವೆ. ಅನೇಕರು ಮಧ್ಯ ರಾತ್ರಿ ಪ್ರದರ್ಶನ ಮುಗಿಸಿ ಕಾರುಗಳಲ್ಲಿ ಮನೆಗೆ ತಲುಪುತ್ತಾರೆ. ಹಿಂದೆ ಆ ಸೌಕರ್ಯಗಳಿರಲಿಲ್ಲ. ಕಲಾವಿದರ ಕಷ್ಟಗಳ ಕುರಿತು ನಾನು ಮಾತನಾಡಿದ್ದೆ.ಯಕ್ಷಗಾನ ಕಲಾವಿದರಿಗೆ ನನ್ನ ಹೇಳಿಕೆ ನೋವು ತಂದುಕೊಟ್ಟಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.
ಮೈಸೂರು ವಿವಿ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ಮಂಗಳವಾರ ನಡೆದ ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು ಹಾಗೂ ನಾವು ಕೂಗುವ ಕೂಗು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಬಿಳಿಮಲೆ ಬಹುಪಾಲು ಮಂದಿ ಯಕ್ಷಗಾನ ಕಲಾವಿದರು ಸಲಿಂಗಿಗಳಾಗಿದ್ದು ಸ್ತ್ರೀ ಪಾತ್ರಧಾರಿಗಳ ಮೇಲೆ ಇತರರಿಗೆ ಮೋಹವಿರುತ್ತಿತ್ತು.ಯಕ್ಷಗಾನ ಕಲಾವಿದರು ಮೇಳಕ್ಕೆಂದು ಲಾರಿ ಏರಿ ಹೊರಟರೆ ಆರೇಳು ತಿಂಗಳು ತಿರುಗಾಟದಲ್ಲೇ ಇದ್ದುದರಿಂದ, ಅವರಲ್ಲಿನ ಕಾಮ ಭಾವನೆ ಸಲಿಂಗಕ್ಕೆ ದೂಡುತ್ತಿತ್ತು. ಅಲ್ಲಿ ಅಂತಹ ಅನಿವಾರ್ಯತೆಯೂ ಇರುತ್ತಿತ್ತು ಎಂದಿದ್ದರು.
ಸತ್ಯವನ್ನು ಹೇಳಲು ಹಿಂಜರಿಯಬಾರದು. ಸಾಮಾನ್ಯವಾಗಿ ಕಲಾವಿದರಿಗೆ ಯಾರು ಹೆಣ್ಣು ಕೊಡುವುದಿಲ್ಲ. ಕಲಾವಿದರು ಮೇಳಕ್ಕೆಂದು ಹೋದರೆ ವಾಪಸ್ ಬರುವುದು ಆರೇಳು ತಿಂಗಳು. ಮನೆಯವರನ್ನು ಬಿಟ್ಟು ಇರಬೇಕಿತ್ತು. ಈ ಕಲಾವಿದರ ಪೈಕಿ ಸ್ತ್ರೀ ವೇಷಧಾರಿಗಳ ಮೇಲೆ ಪ್ರೀತಿ, ಮೋಹ ಏರ್ಪಡುತ್ತಿತ್ತು. ಒಂದು ವೇಳೆ ಸ್ತ್ರೀ ವೇಷದ ಕಲಾವಿದ ಸಲಿಂಗಕಾಮ ನಿರಾಕರಿಸಿದ್ದರೆ, ಭಾಗವತರು ಮರು ದಿವಸ ಅವರಿಗೆ ಪದ್ಯವನ್ನೇ ಕೊಡುತ್ತಿರಲಿಲ್ಲ. ರಂಗಭೂಮಿಯ ಮೇಲೆ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲಾಗುತ್ತಿತ್ತು. ಮೇಳದಲ್ಲಿ ಅವಕಾಶ ಇಲ್ಲದೆ ಹೋದರೆ ಬದುಕೇ ಇಲ್ಲವೆಂಬ ಒತ್ತಡದಲ್ಲಿ ಕಲಾವಿದರು ಇರುತ್ತಿದ್ದರು ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು.


