ಮೈಸೂರು : ಬಾಲರಾಮನ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಲಾಗುತ್ತೆ ಎಂದು ಮೈಸೂರಿನಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಘೋಷಣೆ ಮಾಡಿದ್ದಾರೆ.
ಜನವರಿ 22ರಂದು ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡ್ತೇವೆ. ಎಲ್ಲರ ಬಳಿ ದೇಣಿಗೆ ಸಂಗ್ರಹ ಮಾಡಿ ಮೈಸೂರು ತಾಲೂಕಿನ ಹಾರೋಹಳ್ಳಿಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಆಗಿದೆ. ದೇಶದ ಜನರು ಎದುರು ನೋಡುತ್ತಿರುವ ಬಾಲ ರಾಮನ ವಿಗ್ರಹ ಮೈಸೂರು ತಾಲೂಕಿನ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿಯ ದಲಿತ ಸಮುದಾಯದ ಮುಖಂಡರಾದ ರಾಮದಾಸ್ ಜಮೀನಿನಲ್ಲಿ ಕೃಷ್ಣ ಶಿಲೆ ಸಿಕ್ಕಿರುವುದು ನಮಗೆಲ್ಲ ಸಂತೋಷ. ಇಡೀ ಭಾರತ ದೇಶ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ರಾಮಲಲ್ಲಾ ವಿಗ್ರಹದ ಕಡೆ ನೋಡುತ್ತಿದ್ದಾರೆ.
ನಮ್ಮ ದಲಿತ ಬಾಂಧವರ ಜಮೀನಿನಲ್ಲಿ ಮೂಡಿ ಬಂದಿರುವ ಶಿಲೆ. ಈ ಶಿಲೆಯನ್ನ ಕೆತ್ತನೆ ಮಾಡಿರುವವರು ನಮ್ಮ ಮೈಸೂರಿನವರು. ಕೃಷ್ಣ ಶಿಲೆಯನ್ನು ಹುಡುಕಿದ ಶ್ರೀನಿವಾಸ್ ಕೂಡ ನಮ್ಮ ಮೈಸೂರಿನವರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಬಂದಿದ್ದ ವೇಳೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಪ್ರಾರ್ಥನೆ ಮಾಡಿದ್ದರು. ಈಗ ಇದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಮಲಲ್ಲಾ ಮೂರ್ತಿಯ ಶಿಲೆ ಸಿಕ್ಕಿದೆ. ಜ.22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆಗುತ್ತೆ. ಹೀಗಾಗಿ ಶ್ರೀ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕ ಜಾಗದಲ್ಲೇ ಮಂದಿರ ನಿರ್ಮಾಣ ಮಾಡುತ್ತೇವೆ ಎಂದರು.
ಅರುಣ್ ಯೋಗಿರಾಜ್ ಅವರಿಂದಲೇ ದೇಗುಲಕ್ಕೆ ಮೂರ್ತಿ ಕೆತ್ತನೆ ಮಾಡಿಸಲಾಗುತ್ತೆ. ಅರುಣ್ ಮೈಸೂರಿಗೆ ಬಂದ ನಂತರ ಅವರಿಗೆ ಈ ಬಗ್ಗೆ ಮನವಿ ಮಾಡಲಾಗುವುದು. ರಾಮ, ಲಕ್ಷ್ಮಣ, ಸೀತಾ, ಭರತ, ಶತೃಘ್ನ ಸ್ವ ಪರಿವಾರ ಸಮೇತವಾದ ದೇಗುಲ ಇದಾಗಲಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.