Thursday, November 20, 2025
19.1 C
Bengaluru
Google search engine
LIVE
ಮನೆ#Exclusive NewsTop Newsವಯನಾಡು ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ! ಪ್ರಿಯಾಂಕಾ ಗಾಂಧಿ ಚೊಚ್ಚಲ ಚುನಾವಣೆಗೆ ರೆಡಿ

ವಯನಾಡು ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ! ಪ್ರಿಯಾಂಕಾ ಗಾಂಧಿ ಚೊಚ್ಚಲ ಚುನಾವಣೆಗೆ ರೆಡಿ

ಹೊಸದಿಲ್ಲಿ: ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ತೆರವು ಮಾಡಿದ ಕೇರಳದ ವಯನಾಡು ಲೋಕಸಭೆ ಕ್ಷೇತ್ರದಲ್ಲಿ ಉಪ ಚುನಾವಣೆ ನವೆಂಬರ್‌ 13 ರಂದು ನಡೆಯಲಿದೆ. ಈ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಟಿಕೆಟ್‌ ನೀಡಲಾಗಿದೆ. ಈ ಮೂಲಕ ಪ್ರಿಯಾಂಕಾ ಚೊಚ್ಚಲ ಚುನಾವಣೆಗೆ ಕಣಕ್ಕೆ ಇಳಿಯಲಿದ್ದಾರೆ.

ಸಾರ್ವತ್ರಿಕ ಚುನಾವಣೆಧಿಯಲ್ಲಿ ರಾಯ್‌ಬರೇಲಿ ಮತ್ತು ವಯನಾಡು ಎರಡೂ ಕಡೆ ಗೆಲುವು ಸಾಧಿಸಿದ್ದ ರಾಹುಲ್‌ ಗಾಂಧಿ ಅವರು ರಾಯ್‌ಬರೇಲಿ ಕ್ಷೇತ್ರ ಉಳಿಸಿಕೊಂಡು, ವಯನಾಡು ಕ್ಷೇತ್ರ ತೆರವುಗೊಳಿಸಿದ್ದರು. ವಯನಾಡಿಗೆ ಉಪ ಚುನಾಧಿವಣೆ ನಿಗದಿಯಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಣಕ್ಕಿಳಿಯಲಿದ್ದಾರೆ. ಚುನಾವಣೆ ಘೋಷಣೆ ಬೆನ್ನಿಲ್ಲೇ ಪ್ರಿಯಾಂಕಾ ಹೆಸರನ್ನು ಹೈಕಮಾಂಡ್‌ ಪ್ರಕಟಿಸಿದೆ.

ಗಾಂಧಿ ಮನೆತನದ ಮತ್ತೊಂದು ಕುಡಿ

ವಯನಾಡು ಕ್ಷೇತ್ರದಿಂದ ಉಪ ಚುನಾವಣೆ ಮೂಲಕ ಗಾಂಧಿ ಮನೆತನದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ ಕೊಡಲು ವೇದಿಕೆಯು ಸಜ್ಜಾಗಿದೆ. ರಾಜಕೀಯ ಪ್ರವೇಶಕ್ಕೆ ಸಜ್ಜಾಗಿರುವ 52 ವರ್ಷದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಚೊಚ್ಚಲ ಚುನಾವಣೆಯನ್ನು ಎದುರಿಸಲಿದ್ದಾರೆ.

2 ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್‌ ಘೋಷಣೆ

ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಿಂದ ರಾಹುಲ್ ಮಾಂಕೂಟತ್ತಿಲ್ ಹಾಗೂ ಚೆಲ್ಲಕ್ಕಾರ ಮೀಸಲು ಕ್ಷೇತ್ರಕ್ಕೆ ರಮ್ಯಾ ಹರಿದಾಸ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಈ ಎರಡೂ ಚುನಾವಣೆಗಳನ್ನು ಕಾಂಗ್ರೆಸ್‌ ಪ್ರತಿಷ್ಠೆಯಾಗಿ ಸ್ವೀಕರಿಸಿದೆ.

ಇವಿಎಂ 100% ಪರಿಶುದ್ಧ

ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಚುನಾವಣೆ ಘೋಷಣೆ ಬೆನ್ನಿಗೆ ಕಾಂಗ್ರೆಸ್‌ ಮತ್ತೊಮ್ಮೆ ಇವಿಎಂಗಳ ಬಗ್ಗೆ ತಗಾದೆ ತೆಗೆದಿದೆ. ಕಾಂಗ್ರೆಸ್‌ ಆರೋಪ ನಿರಾಕರಿಸಿರುವ ಚುನಾವಣಾ ಆಯೋಗ, ಇವಿಎಂಗಳು ಶೇ.100ರಷ್ಟು ಪರಿಶುದ್ಧ ಎಂದು ಪ್ರತಿಪಾದಿಸಿದೆ.

ಹರಿಯಾಣ ಸೋಲಿನ ಆಘಾತದಿಂದ ಚೇತರಿಸಿಕೊಳ್ಳದ ಕಾಂಗ್ರೆಸ್‌, ಸೋಮವಾರ ವಿದ್ಯುನ್ಮಾನ ಮತಯಂತ್ರಗಳ ಪಾವಿತ್ರ್ಯತೆ ಬಗ್ಗೆ ಪ್ರಶ್ನೆ ಮಾಡಿದೆ. ಹೆಜ್ಬೊಲ್ಲಾಗಳು ಬಳಸುತ್ತಿದ್ದ ಪೇಜರ್‌ಗಳನ್ನು ಇಸ್ರೇಲ್‌ ಹ್ಯಾಕ್‌ ಮಾಡುವುದಾದರೆ, ಇವಿಎಂಗಳನ್ನು ಹ್ಯಾಕ್‌ ಮಾಡಲು ಸಾಧ್ಯವಿಲ್ಲವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ನಾಯಕರು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್‌ ನಾಯಕರ ಸಂಶಯಗಳಿಗೆ ತಿರುಗೇಟು ನೀಡಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ಕುಮಾರ್‌, ‘‘ಚುನಾವಣೆ ಬಂದಾಗಲೆಲ್ಲಾಇವಿಎಂಗಳ ಬಗ್ಗೆ ದೂರು ಬರುತ್ತವೆ. ಕಾಲ ಬದಲಾದಂತೆ ಆರೋಪಗಳ ಸ್ವರೂಪವೂ ಬದಲಾಗಿದೆ. ಆದರೆ, 100% ಇವಿಎಂಗಳು ಪರಿಶುದ್ಧವಾಗಿವೆ. ಮತಯಂತ್ರಗಳನ್ನು ಹ್ಯಾಕ್‌ ಮಾಡಲು ಸಾಧ್ಯವೇ ಇಲ್ಲ,’’ ಎಂದು ಸ್ಪಷ್ಟಪಡಿಸಿದರು.

ಮಾಧ್ಯಮಗಳಿಗೆ ಆತ್ಮಾವಲೋಕನ ಪಾಠ

ಮತಗಟ್ಟೆ ಸಮೀಕ್ಷೆ ಪ್ರಕಟಿಸುವ ವಿದ್ಯುನ್ಮಾನ ಮಾಧ್ಯಮಗಳಿಗೆ ಆತ್ಮಾವಲೋಕನದ ಪಾಠ ಮಾಡಿದ ಆಯುಕ್ತ ರಾಜೀವ್‌ ಕುಮಾರ್‌, ‘‘ಕಳೆದ ಮೂರ್ನಾಲ್ಕು ಚುನಾವಣೆ ಮತಗಟ್ಟೆ ಸಮೀಕ್ಷೆಗಳು ತಲೆಕೆಳಗಾಗಿವೆ. ಸಮೀಕ್ಷೆಗೆ ಸಂದರ್ಶಿಸುವ ಜನರ ಪ್ರಮಾಣ, ಎಲ್ಲಿಸಮೀಕ್ಷೆ ನಡೆಸಲಾಯಿತು. ಯಾಕೆ ಫಲಿತಾಂಶ ಉಲ್ಟಾ ಆಯಿತು ಎಂಬುದನ್ನು ಮಧ್ಯಮಗಳು ಅವಲೋಕಿಸಬೇಕು,’’ ಎಂದು ಹೇಳಿದರು.

‘‘ಮತ ಎಣಿಕೆ ದಿನ ಆತುರಾತುರಾಗಿ ಹಿನ್ನಡೆ, ಮುನ್ನಡೆ ಪ್ರಕಟಿಸುವ ಮಾಧ್ಯಮಗಳಿಗೆ ಯಾವುದೇ ಪೂರಕ ಆಧಾರಗಳಿರುವುದಿಲ್ಲ. ಎಣಿಕೆ ಆರಂಭವಾದ ಒಂದುವರೆ ಗಂಟೆ ಬಳಿಕ ಆಯೋಗ ಫಲಿತಾಂಶದ ಪ್ರಗತಿಯ ವಿವರ ಪ್ರಕಟಿಸಲಿದೆ. ನೈಜ ಫಲಿತಾಂಶಗಳು ಬರಲಾರಂಬಿಸಿದಾಗ ಉಹಾತ್ಮಕವಾಗಿ ನೀಡಿದ್ದ ಫಲಿತಾಂಶಗಳು ತಲೆಕೆಳಗಾಗಲಿವೆ,’’ ಎಂದು ರಾಜೀವ್‌ಕುಮಾರ್‌ ವಿವರಿಸಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments