ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸುಖರಾಯಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ಕೇಸ್ನಲ್ಲಿ ಹೊಸ ಬೆಲವಣಿಗೆಗಳು ಬೆಳಕಿಗೆ ಬಂದಿವೆ.
ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಕೊಲೆ ಕೇಸ್ನಲ್ಲಿ ಬಜರಂಗ ದಳ ಕಾರ್ಯಕರ್ತ ಭಾಗಿಯಾಗಿರುವ ಹಿನ್ನೆಲೆ ವಿಥುನ್ ಎಂಬಾತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು.. ಈ ಕೊಲೆ ಕೇಸ್ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಫೇಸ್‌ಬುಕ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಗಣೇಶ್ ಹತ್ಯೆಯಲ್ಲಿ A6 ಆಗಿರುವ ಮಿಥುನ್ A1 ಸಂಜಯ್ ಸ್ನೇಹಿತನಾಗಿದ್ದು, RSS ಮತ್ತು ಬಜರಂಗದಳದಲ್ಲಿ ಸಕ್ರಿಯ ಕಾರ್ಯಕರ್ತ ಎಂಬುದು ಗೊತ್ತಾಗಿದೆ. ಪ್ರಕರಣ ಸಂಬಂಧ A1 ಸಂಜಯ್ ಮತ್ತು A3 ನಾಗಭೂಷಣ್ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, A2 ನಿತಿನ್, A4 ದರ್ಶನ್ ಹಾಗೂ ಅಜಯ್ಗಾಗಿ ಹುಡುಕಾಟ ಮುಂದುವರಿದಿದೆ. ಗಣೇಶ್ ಹತ್ಯೆ ಬಳಿಕ ಈ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಕಳೆದ ಡಿಸೆಂಬರ್ 5ರ ರಾತ್ರಿ ಸಖರಾಯಪಟ್ಟಣದ ಮಠದ ಗುತ್ತಿ ರಸ್ತೆಯಲ್ಲಿ ಗಣೇಶ್ ಗೌಡ ಎಂಬುವವರನ್ನು ಗುಂಪೊಂದು ಕೊಲೆ ಮಾಡಿತ್ತು. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ಇದೀಗ ಬಜರಂಗದಳ ಕಾರ್ಯಕರ್ತ ಮಿಥುನ್ ಭಾಗಿತ್ವ ಬಯಲಾಗಿದೆ.
ಕೊಲೆಯ ನಂತರ ಸಖರಾಯಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಹೆಚ್ಚಿನ ಭದ್ರತೆ ಕಲ್ಪಿಸಿದ್ದಾರೆ. ಗಣೇಶ್ ಗೌಡ ಕುಟುಂಬಕ್ಕೆ ಸಾಂತ್ವನ ತಿಳಿಸಿ, ನ್ಯಾಯಕ್ಕಾಗಿ ಒತ್ತಾಯಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.


