ಚಿತ್ರದುರ್ಗ: ಅತಿವೃಷ್ಟಿ ಪರಿಹಾರ ಕೊಡುವ ಯೋಗ್ಯತೆ ಸರ್ಕಾರಕ್ಕೆ ಇಲ್ಲ. ಇಂತಹ ಸಿಎಂ ಇದ್ದರೇನು, ಬಿದ್ದರೇನು ಎಂದು ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ..
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ನಂತರ ಸಿಎಂ ಆಗಿರುತ್ತಾರೋ ಇಲ್ಲವೋ ಎಂದು ಸಿದ್ದರಾಮಯ್ಯನವರಿಗೆ ನಂಬಿಕೆಯಿಲ್ಲ. ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಕೆಲ ಶಾಸಕರು ಹೇಳುತ್ತಿದಾರೆ. ಕಾಂಗ್ರೆಸ್ ಆಂತರಿಕ ಕಚ್ಚಾಟದಲ್ಲಿ ಅಭಿವೃದ್ಧಿ ಮರೆತಿದೆ.
ಸಿಎಂ ಕುರ್ಚಿ ಕಾಳಗ ದಿನೇದಿನೇ ವಿಕೋಪಕ್ಕೆ ಹೋಗುತ್ತಿದೆ. ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು. ಸಿಎಂ ಮಾತನ್ನು ಆಡಳಿತ ಪಕ್ಷದವರೇ ಒಪ್ಪಿಕೊಳ್ಳುತ್ತಿಲ್ಲ, ಇನ್ನು ನಾವ್ಯಾರು. ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಎನ್ನುತ್ತಿದ್ದರು. ನಿನ್ನೆ ಹೈಕಮಾಂಡ್ ಆಶೀರ್ವಾದ ಮಾಡಿದರೆ ಐದು ವರ್ಷ ನಾನೇ ಸಿಎಂ ಅಂದಿದ್ದಾರೆ. ಈಗ ಜನ ನನಗೆ 5 ವರ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇನ್ನು ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಕೂಗು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಸಿಎಂ ಆಗಿರಬೇಕೆಂದು ನಿರ್ಧಾರ ನಾವು ಮಾಡಲ್ಲ.ಆಡಳಿತ ಪಕ್ಷದ ಶಾಸಕರು, ಸಚಿವರೇ ಹೊಡೆದಾಡ್ತಿದ್ದಾರೆ. ಸಿಎಂ ಯಾರಾಗುತ್ತಾರೆ ಎನ್ನುವುದರಲ್ಲಿ ಬಿಜೆಪಿ ಹಾಗೂ ರಾಜ್ಯದ ಜನತೆಗೆ ಆಸಕ್ತಿ ಇಲ್ಲ. ರಾಜ್ಯದ ಜನ ಅಭಿವೃದ್ಧಿ ಬಯಸುತ್ತಿದ್ದಾರೆ. ರಾಜ್ಯದ ರೈತರು, ಬಡವರು ಒಳ್ಳೆಯ ಕೆಲಸವಾಗಬೇಕೆಂದು ಬಯಸುತ್ತಾರೆ ಎಂದರು.
ನವೆಂಬರ್ ಕ್ರಾಂತಿ ಎಂದು ಆಡಳಿತ ಪಕ್ಷದ ಶಾಸಕರು, ಸಚಿವರೇ ಮಾತನಾಡುತ್ತಿದ್ದಾರೆ. ಇದು ತಾರ್ಕಿಕ ಅಂತ್ಯಕ್ಕೆ ಹೋಗುತ್ತದೆ ಎನ್ನುವ ಮುನ್ಸೂಚನೆ ಕಾಣುತ್ತಿದೆ. ಸ್ಪಷ್ಟ ಬಹುಮತದಿಂದಿಗೆ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದೆ. ಯಾರೇ ಸಿಎಂ ಆದರೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭಿವೃದ್ಧಿ ಅಸಾಧ್ಯ. ಸಿಎಂ, ಡಿಸಿಎಂ, ಗ್ಯಾರಂಟಿ ಇಡೀ ದೇಶಕ್ಕೆ ಮಾದರಿ ಎನ್ನುತ್ತಿದ್ದಾರೆ.
ಕಾಂಗ್ರೆಸ್ ಆಡಳಿತ ಹಿಮಾಚಲ ಪ್ರದೇಶ ಇಂದು ಆರ್ಥಿಕ ಸಂಕಷ್ಟದಲ್ಲಿದೆ. ತೆಲಂಗಾಣ ಸಿಎಂ ಗ್ಯಾರಂಟಿಯಿಂದ ಸರಕಾರಿ ನೌಕರರಿಗೆ ಸಂಬಳ ಕೊಡಕ್ಕಾಗುತ್ತಿಲ್ಲ ಎಂತಿದ್ದಾರೆ. ನಮ್ಮ ರಾಜ್ಯದಲ್ಲೂ ಪರಿಸ್ಥಿತಿ ಇದಕ್ಕೆ ಭಿನ್ನವಾಗಿಲ್ಲ. ಕಾಂಟ್ರ್ಯಾಕ್ಟರ್ ಬಿಲ್ ಕೊಡದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಾವಿರಾರು ಕೋಟಿ ಬಂಡವಾಳ ಹಾಕಿದವರು ಇಂದು ಬೀದಿಗೆ ಬಂದಿದ್ದಾರೆ. ಸಣ್ಣ ಗುತ್ತಿಗೆದಾರರು ಇಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರಾಜ್ಯ ಸರಕಾರ, ಗೃಹ ಇಲಾಖೆ ಇದಕ್ಕೆ ಸ್ಪಂದಿಸುತ್ತಿಲ್ಲ ಎಂದು ವಿಜಯೇಂದ್ರ ಹೇಳಿದರು.


