ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಖ್ಯಾತ ಉದ್ಯಮಿ ಡಾ ಸಿ ಜೆ ರಾಯ್ ಅವರ ಅಂತ್ಯಕ್ರಿಯೆ ಇಂದು ಸಂಜೆ ಬನ್ನೇರುಘಟ್ಟದ ಕಾಸಾಗ್ರೌಂಡ್ನಲ್ಲಿ ನಡೆಯಲಿದೆ.
ತಮ್ಮ ಆಪ್ತರ ಬಳಿ ಈ ಹಿಂದೆ ವ್ಯಕ್ತಪಡಿಸಿದ್ದ ಇಚ್ಛೆಯಂತೆ ಅದೇ ಸ್ಥಳದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ . ಅಂತಿಮ ದರ್ಶನಕ್ಕಾಗಿ ಡಾ ಸಿ ಜೆ ರಾಯ್ ಅವರ ಪಾರ್ಥಿವ ಶರೀರವನ್ನು ಸಹೋದರ ಬಾಬು ಜೋಸೆಫ್ ಒಡೆತನದ ಕೋರಮಂಗಲದ ವೈಟ್ ಹೌಸ್ನಲ್ಲಿ ಇಡಲಾಗುವುದು. ಅಂತ್ಯಕ್ರಿಯೆಯಲ್ಲಿ ನಾಡಿನ ಪ್ರಮುಖ ಉದ್ಯಮಿಗಳು ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ಭಾಗವಹಿಸುವ ಸಾಧ್ಯತೆ ಇದೆ.
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ ಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದೆ. ಉದ್ಯಮಿ ಸಾವಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗದ ಹಿನ್ನೆಲೆ ಪೊಲೀಸರು BNS 174ಸಿ ಅಡಿಯಲ್ಲಿ UDR ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಕಾನ್ಫಿಡೆಂಟ್ ಗ್ರೂಪ್ನ ಮ್ಯಾನೇಜಿಂಗ್ ಡೈರೆಕ್ಟರ್ ಟಿ ಎ ಜೋಸೆಫ್ ಅವರು ತನಿಖೆಗೆ ಮನವಿ ಸಲ್ಲಿಸಿದ್ದಾರೆ. ದೂರಿನಲ್ಲಿ ಐಟಿ ಅಧಿಕಾರಿಗಳ ವಿರುದ್ಧ ಯಾವುದೇ ನೇರ ಆರೋಪ ಮಾಡಿಲ್ಲ ಎಂದು ತಿಳಿದುಬಂದಿದೆ.
ದೂರಿನ ಪ್ರಕಾರ ಶುಕ್ರವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಸಿ ಜೆ ರಾಯ್ ಅವರು ಲ್ಯಾಂಗ್ಫೋರ್ಡ್ ರಸ್ತೆಯಲ್ಲಿರುವ ಕಾನ್ಫಿಡೆಂಟ್ ಕಚೇರಿಗೆ ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಲು ಬಂದಿದ್ದರು. ಬಳಿಕ ಅವರು ತಮ್ಮ ಕ್ಯಾಬಿನ್ಗೆ ತೆರಳಿದ್ದು ಸ್ವಲ್ಪ ಸಮಯದ ನಂತರ ತಾಯಿಯೊಂದಿಗೆ ಮಾತನಾಡಬೇಕೆಂದು ತಿಳಿಸಿದ್ದಾರೆ. ಸುಮಾರು ಹತ್ತು ನಿಮಿಷಗಳ ಬಳಿಕ ಕ್ಯಾಬಿನ್ಗೆ ಹೋದಾಗ ಯಾರನ್ನೂ ಒಳಗೆ ಬಿಡಬೇಡಿ ಎಂದು ಸೂಚನೆ ನೀಡಿದ್ದಾಗಿ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.
ಮತ್ತೆ ಹತ್ತು ನಿಮಿಷಗಳ ನಂತರ ಕ್ಯಾಬಿನ್ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ ಅದನ್ನು ಮುರಿದು ಒಳಗೆ ಪ್ರವೇಶಿಸಿದಾಗ ಡಾ ರಾಯ್ ಅವರು ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಶರ್ಟ್ ಮೇಲೆ ರಕ್ತವಿದ್ದು ದೇಹ ತಣ್ಣಗಾಗಿತ್ತು. ತಕ್ಷಣ ಅಂಬ್ಯುಲೆನ್ಸ್ ಕರೆಸಿ ಅವರನ್ನು ನಾರಾಯಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಪರೀಕ್ಷಿಸಿದಾಗ ನಾಡಿಮಿಡಿತ ಇಲ್ಲ ಎಂದು ದೃಢಪಡಿಸಿದರು.
ಡಾ ಸಿ ಜೆ ರಾಯ್ ಆತ್ಮಹತ್ಯೆಗೆ ಯಾವ ಒತ್ತಡ ಕಾರಣವಾಗಿರಬಹುದು ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ದೂರುದಾರರು ಮನವಿ ಮಾಡಿದ್ದಾರೆ. ಈ ನಡುವೆ ಸಹೋದರ ಸಿ ಜೆ ಬಾಬು ಮಾತನಾಡಿ ರಾಯ್ ಅವರಿಗೆ ಯಾವುದೇ ಸಾಲವೂ ಶತ್ರುಗಳೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಆದಾಯ ತೆರಿಗೆ ಇಲಾಖೆಯ ಒತ್ತಡ ಇತ್ತು ಎಂದು ಹೇಳಿದ್ದಾರೆ. ಸಾವಿನ ಮುನ್ನದಿನ ಬೆಳಿಗ್ಗೆ ರಾಯ್ ಅವರು ಕರೆ ಮಾಡಿ ಒತ್ತಡ ಹೆಚ್ಚಾಗಿದೆ ಎಂದು ಹೇಳಿದ್ದರು ಎಂದು ಬಾಬು ತಿಳಿಸಿದ್ದಾರೆ.
ಕಂಪನಿ ಲಾಭದಲ್ಲೇ ಇತ್ತು ಯಾವುದೇ ಆರ್ಥಿಕ ಸಂಕಷ್ಟ ಇರಲಿಲ್ಲ ಎಂದು ಕುಟುಂಬ ಸ್ಪಷ್ಟನೆ ನೀಡಿದೆ. ರಾಯ್ ಅವರು ಬೆಂಗಳೂರು ಕೇರಳ ತಮಿಳುನಾಡು ಸೇರಿದಂತೆ ದೇಶ ವಿದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು. ಕಳೆದ ಎರಡು ತಿಂಗಳಿಂದ ಕೇರಳ ಐಟಿ ಅಧಿಕಾರಿಗಳು ಅವರ ಮೇಲೆ ತನಿಖೆ ನಡೆಸುತ್ತಿದ್ದು ಕಳೆದ ಮೂರು ದಿನಗಳಿಂದ ಬೆಂಗಳೂರಿನ ಕಚೇರಿಯಲ್ಲಿ ಐಟಿ ದಾಳಿ ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ ರಾಯ್ ಅವರು ಕಚೇರಿಯಲ್ಲೇ ಪಿಸ್ತೂಲ್ನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ದೇಶಾದ್ಯಂತ ಆಘಾತ ಮೂಡಿಸಿದೆ.


