ಪ್ರತಿ ವರ್ಷ ವರ್ಗಾವಣೆಯನ್ನೆ ಎದುರು ನೋಡುವ ಶಿಕ್ಷಕರಿಗೆ ಈ ವರ್ಷದ ವರ್ಗಾವಣೆ ಹೆಚ್ಚಿನ ಸಂತಸವೇನೂ ತಂದಿಲ್ಲ. ಏಕೆಂದರೆ, ಈ ವರ್ಷ ವರ್ಗಾವಣೆ ಭಾಗ್ಯ ದೊರೆತಿದ್ದು 15 ಸಾವಿರ ಶಿಕ್ಷಕರಿಗೆ ಮಾತ್ರ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಅರ್ಧಕ್ಕಿಂತ ಕಡಿಮೆ ಇದೆ.
ಪ್ರಸಕ್ತ ವರ್ಷದಲ್ಲಿ ವರ್ಗಾವಣೆ ಕೋರಿ 62,314 ಶಿಕ್ಷಕರು ಅರ್ಜಿ ಸಲ್ಲಿಸಿದ್ದರು. ಆದರೆ, ವರ್ಗಾವಣೆ ಭಾಗ್ಯ ದೊರೆತಿದ್ದು 15.711 ಶಿಕ್ಷಕರಿಗೆ ಮಾತ್ರ. 2023ರಲ್ಲಿ 73.785 ಅರ್ಜಿ ಸಲ್ಲಿಸಿದ್ದರು. ಈ ಪೈಕಿ 30,629 ಶಿಕ್ಷಕರನ್ನು ವರ್ಗಾವಣೆ ಮಾಡ ಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ವರ್ಗಾವಣೆಗೊಂಡ ವರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ.
ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದವರ ಸಂಖ್ಯೆಯೂ ಈ ಬಾರಿ ಕಡಿಮೆ ಇದೆ. ಈ ಬಾರಿ ಕಡಿಮೆ ಇದೆ. ಸುಮಾರು 11 ಸಾವಿರದಷ್ಟು ಕಡಿಮೆ ಅರ್ಜಿಗಳು ಸಲ್ಲಿಕೆಯಾಗಿವೆ. ವರ್ಗಾವಣೆಗೊಂಡಿರುವ 15,711 ಫಲಾನುಭವಿಗಳಲ್ಲಿ 10,595 ಪ್ರಾಥಮಿಕ ಮತ್ತು 5,116 ಪ್ರೌಢಶಾಲಾ ಶಿಕ್ಷಕರಿದ್ದಾರೆ. ವರ್ಗಾವಣೆಯಲ್ಲಿ ಕೋರಿಕೆಯ ವರ್ಗಾವಣೆಯೇ ಹೆಚ್ಚಿದೆ. 8,140 ಶಿಕ್ಷಕರು ಕೋರಿಕೆ ವರ್ಗಾವಣೆ ಪಡೆದುಕೊಂಡರೆ, 1,400 ಶಿಕ್ಷಕರು ಪರಸ್ಪರ ವರ್ಗಾವಣೆಯ ಲಾಭ ಪಡೆದುಕೊಂಡಿದ್ದಾರೆ.
ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ, ಈ ವರ್ಷ ವರ್ಗಾವಣೆಗೊಂಡವರ ಸಂಖ್ಯೆ ಕಡಿಮೆ ಇದೆ. 2021 ರಲ್ಲಿ ಶಿಕ್ಷಕರು ವರ್ಗಾವಣೆಗೊಂಡಿದ್ದರು. ರಾಜ್ಯದಲ್ಲಿ 47,516 ಸರಕಾರಿ ಶಾಲೆಗಳಿದ್ದು, 1.77 ಲಕ್ಷ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಡಿಮೆ ಏಕೆ?
2023ರಲ್ಲಿ ವರ್ಗಾವಣೆ ಪ್ರಕ್ರಿಯೆ ಜೂನ್‌ನಲ್ಲಿ ನಡೆದಿತ್ತು. 2024ರಲ್ಲೂ ಇದೇ ಅವಧಿಯಲ್ಲಿ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿತ್ತು. ಪ್ರತಿ ವರ್ಷ ವರ್ಗಾವಣೆ ಪ್ರಕ್ರಿಯೆ ನಡೆದರೆ, ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆ ಇರುತ್ತದೆ. ನಾನಾ ಕಾರಣಗಳಿಂದ 2-3 ವರ್ಷ ವರ್ಗಾವಣೆಗೆ ಅಡೆತಡೆಗಳಾದರೆ, ಆಗ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಿರುತ್ತದೆ.
ಕೈಬಿಟ್ಟ ಕಡ್ಡಾಯ ವರ್ಗಾವಣೆ
ಈ ವರ್ಷ ಹೆಚ್ಚು ಸದ್ದು ಮಾಡಿದ್ದ ಕಡ್ಡಾಯ ವರ್ಗಾವಣೆಯನ್ನು ಶಿಕ್ಷಣ ಇಲಾಖೆ ಕೈ ಬಿಟ್ಟಿರುವುದೇ ವರ್ಗಾವಣೆಗೊಂಡ ಶಿಕ್ಷಕರ ಪ್ರಮಾಣ ಕಡಿಮೆಯಾಗಿರುವುದಕ್ಕೆ ಮತ್ತೊಂದು ಕಾರಣ ಎನ್ನಲಾಗಿದೆ. ಒಂದು ವರ್ಷ ಸಾಮಾನ್ಯ ವರ್ಗಾವಣೆ, ಮತ್ತೊಂದು ವರ್ಷ ಕಡ್ಡಾಯ ವರ್ಗಾವಣೆಯನ್ನು ಶಿಕ್ಷಣ ಇಲಾಖೆ ಕೈಗೊಳ್ಳಬೇಕಿದೆ. ಆದರೆ, ಕಡ್ಡಾಯ ವರ್ಗಾವಣೆಗೆ ಶಿಕ್ಷಕರು ವಿರೋಧ ವ್ಯಕ್ತಪಡಿಸಿ ರಾಜಕೀಯ ಪ್ರಭಾವ ಬಳಸಿ ರದ್ದು ಮಾಡಿಸುವಲ್ಲಿ ಈ ವರ್ಷವೂ ಯಶಸ್ವಿಯಾಗಿದ್ದಾರೆ.