ಜಿಲ್ಲೆಸುದ್ದಿ

ಕಲಬುರಗಿಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕೋಮು ಸಂಘರ್ಷ

ಕಲಬುರಗಿ: ಬಾಗಲಕೋಟೆಯ ಘಟನೆಯ ಬೆನ್ನಲ್ಲೇ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಎರಡು ಕೋಮುಗಳ ನಡುವೆ ಭೀಕರ ಸಂಘರ್ಷ ನಡೆದಿದೆ. ಡಿಜೆ ಸೌಂಡ್ ಮತ್ತು ಹಾಡಿನ ವಿಚಾರವಾಗಿ ಆರಂಭವಾದ ಸಣ್ಣ ಕಿರಿಕ್, ಕಲ್ಲು ತೂರಾಟ ಮತ್ತು ಮಾರಾಮಾರಿಗೆ ಕಾರಣವಾಗಿದ್ದು, ಇಡೀ ಗ್ರಾಮ ಸದ್ಯ ಬೂದಿ ಮುಚ್ಚಿದ ಕೆಂಡದಂತಾಗಿದೆ. ಮೆರವಣಿಗೆಯ ಸಂದರ್ಭದಲ್ಲಿ ಮನೆಯ ಮಾಳಿಗೆಯ ಮೇಲಿಂದ ಬಾಲಕನೊಬ್ಬ ಕಲ್ಲು ತೂರುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ರಾವೂರ್ ಗ್ರಾಮದ ಗಣೇಶ ಕಟ್ಟೆಯ ಬಳಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವದ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಡಿಜೆಯಲ್ಲಿ ಭಕ್ತಿಗೀತೆಗಳಿಗೆ ಹಿಂದೂ ಕಾರ್ಯಕರ್ತರು ನೃತ್ಯ ಮಾಡುತ್ತಿದ್ದಾಗ, ಮತ್ತೊಂದು ಸಮುದಾಯದವರು ಬಂದು ಸೌಂಡ್ ಕಡಿಮೆ ಮಾಡುವಂತೆ ಸೂಚಿಸಿದ್ದಾರೆ. ಈ ವಿಷಯವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಗಲಾಟೆಯಲ್ಲಿ ಕಲ್ಲು ಮತ್ತು ಕಟ್ಟಿಗೆಗಳಿಂದ ಪರಸ್ಪರ ಹಲ್ಲೆ ನಡೆಸಲಾಗಿದ್ದು, ನಾಲ್ಕೈದು ಜನರಿಗೆ ಗಾಯಗಳಾಗಿವೆ.

ಈ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಶಾಂತಿ ಭಂಗದ ಹಿನ್ನೆಲೆಯಲ್ಲಿ ವಾಡಿ ಪೊಲೀಸ್ ಠಾಣೆಯ ಪಿಎಸ್‌ಐ ತಿರುಮಲೇಶ್ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡು ಸಮುದಾಯದ ಯಾರೊಬ್ಬರೂ ದೂರು ನೀಡಲು ಮುಂದೆ ಬಾರದ ಕಾರಣ, ಪೊಲೀಸರೇ ಸ್ವತಃ ದೂರು ದಾಖಲಿಸಿಕೊಂಡು ಬಿಎನ್‌ಎಸ್ 126 ಕಾಯ್ದೆಯಡಿ ಒಟ್ಟು 8 ಜನರ ವಿರುದ್ಧ ಕೇಸ್ ಹಾಕಿದ್ದಾರೆ. ಸದ್ಯ ಪರಿಸ್ಥಿತಿಯನ್ನು ಹತೋಟಿಗೆ ತರಲು ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಕಲಬುರಗಿ ಎಸ್‌ಪಿ ಅಡ್ಡೂರು ಶ್ರೀನಿವಾಸಲು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೆರವಣಿಗೆ ವೇಳೆ ನಡೆದ ಸಂಘರ್ಷದಲ್ಲಿ ಒಬ್ಬ ವ್ಯಕ್ತಿಗೆ ತೀವ್ರ ಗಾಯವಾಗಿದೆ ಎಂದು ಖಚಿತಪಡಿಸಿದ್ದಾರೆ. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button