Top Newsರಾಜಕೀಯರಾಜ್ಯಸುದ್ದಿಹಣಕಾಸು

ದಾಖಲೆಯ 17ನೇ ಬಜೆಟ್‌ಗೆ ಸಿದ್ಧರಾದ ಸಿಎಂ ಸಿದ್ದರಾಮಯ್ಯ!

ಬಜೆಟ್ ಅಂಗಳದಲ್ಲಿ ದಾಖಲೆ ಬರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ನಾಳೆ 2026-27ನೇ ಸಾಲಿನ ರಾಜ್ಯ ಆಯವ್ಯಯ ಮಂಡನೆಯಾಗಲಿದ್ದು, ಇದು ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 17ನೇ ಬಜೆಟ್ ಎಂಬುದು ವಿಶೇಷ. ಈಗಾಗಲೇ ಎಲ್ಲಾ ಇಲಾಖೆಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿರುವ ಸಿಎಂ, ಆರ್ಥಿಕ ಶಿಸ್ತು ಮತ್ತು ಜನಪದ ಯೋಜನೆಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಬಜೆಟ್ ಅಂತಿಮಗೊಳಿಸಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಇದರೊಂದಿಗೆ ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎನ್ನಲಾಗಿದೆ. ರಾಜ್ಯದ ಮೇಲಿರುವ ಆರ್ಥಿಕ ಹೊರೆಯನ್ನು ತಗ್ಗಿಸಲು ಮತ್ತು ಸಂಪನ್ಮೂಲ ಕ್ರೋಢೀಕರಣಕ್ಕೆ ಸಿಎಂ ಯಾವ ಹೊಸ ಯೋಜನೆಗಳನ್ನು ಘೋಷಿಸಲಿದ್ದಾರೆ ಎಂಬ ಕುತೂಹಲ ಇಡೀ ರಾಜ್ಯದ ಜನತೆಯಲ್ಲಿದೆ.

ಒಂದೆಡೆ ಬಜೆಟ್ ಸಿದ್ಧತೆ ನಡೆಯುತ್ತಿದ್ದರೆ, ಮತ್ತೊಂದೆಡೆ ರಾಜಕೀಯ ವಲಯದಲ್ಲಿ ‘ಪವರ್ ಶೇರಿಂಗ್’ ಚರ್ಚೆ ಕಾವೇರಿದೆ. ಸದನದಲ್ಲಿ ವಿರೋಧ ಪಕ್ಷಗಳು ಈ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ಆದರೆ, ಈ ಸವಾಲನ್ನು ಎದುರಿಸಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಜೋಡಿ ಸನ್ನದ್ಧವಾಗಿದೆ. ಬೆಳಗಾವಿ ಅಧಿವೇಶನದಂತೆಯೇ ಇಲ್ಲಿಯೂ ಜಾಣ್ಮೆಯ ನಡೆ ಪ್ರದರ್ಶಿಸಲು ಇಬ್ಬರೂ ನಾಯಕರು ತಂತ್ರ ರೂಪಿಸಿದ್ದಾರೆ.

ವಿಪಕ್ಷಗಳ ಟೀಕೆಗಳು ತೀವ್ರಗೊಳ್ಳುತ್ತಿದ್ದಂತೆಯೇ ಸಿಎಂ ಮತ್ತು ಡಿಸಿಎಂ ತಮ್ಮ ನಡುವಿನ ಒಗ್ಗಟ್ಟನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿದ್ದಾರೆ. “ನನ್ನ ಮತ್ತು ಡಿ.ಕೆ. ಶಿವಕುಮಾರ್ ಸಂಬಂಧ ಹಾಲು ಜೇನಿನಂತಿದೆ” ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಭಿನ್ನಮತದ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಸವಾಲುಗಳ ಸುಳಿಯ ನಡುವೆಯೂ ಸದನದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುತ್ತಾ ಅಭಿವೃದ್ಧಿ ಪಥದ ಬಜೆಟ್ ಮಂಡಿಸಲು ಸರ್ಕಾರ ಮುಂದಾಗಿದೆ.

Comments (0)

Your email address will not be published. Required fields are marked *

Back to top button