ಬೆಂಗಳೂರು: ಹೈಕೋರ್ಟ್ ತೀರ್ಪಿನ ಬಳಿಕ ಸಿದ್ದರಾಮಯ್ಯ ವೀಕ್ ಆಗಿಲ್ಲ, ಗುಂಡುಕಲ್ಲು ಇದ್ದ ಹಾಗೆ ಇದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮದವರಂದಿಗೆ ಮಾತನಾಡಿದ ಅವರು, ಸಿಎಂ ರಾಜೀನಾಮೆ ಕೊಡಬೇಕು ಎಂಬ ಮಾತು ಕೇಳಿ ಬರ್ತಿದೆ. ನಾವು ನ್ಯಾಯಕ್ಕಾಗಿ ಹೈಕೋರ್ಟ್‌ಗೆ ಹೋಗಿದ್ದೆವು. ಸಿಎಂ ಪಾತ್ರ ಮುಡಾ ಪ್ರಕರಣದಲ್ಲಿ ಏನೂ ಇಲ್ಲ. ಅವರಿಂದ ಯಾವುದೇ ಅಧಿಕಾರ ದುರುಪಯೋಗ ಆಗಿಲ್ಲ. ಆದರೆ ಕೋರ್ಟಿನಲ್ಲಿ ನಮಗೆ ನ್ಯಾಯ ಸಿಕ್ಕಿಲ್ಲ. ಮುಂದೆ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಿದೆ. ಡಬಲ್ ಬೆಂಚ್‌ನಲ್ಲಿ ಇದರ ಬಗ್ಗೆ ಪ್ರಶ್ನೆ ಮಾಡುತ್ತೇವೆ. ಮುಖ್ಯಮಂತ್ರಿಗಳು ರಾಜಿನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದರು.

ವಿಚಾರಣೆ ವೇಳೆ ಸಿಎಂ ಪಾತ್ರ ಏನು ಎಂದು ನ್ಯಾಯಾಧೀಶರೇ ಕೇಳಿದರು. ಆಗ ಇದರ ವಿಚಾರವಾಗಿ ತೀರ್ಪಿನಲ್ಲಿ ಹೇಳಿಲ್ಲ. ಕಾನೂನಾತ್ಮಕ ಹೋರಾಟ ಮುಂದುವರೆಸುತ್ತೇವೆ. ಸಿಎಂಗೆ 40 ರಿಂದ 45 ವರ್ಷ ರಾಜಕೀಯ ಜೀವನದಲ್ಲಿ ಯಾವುದೇ ಆಪಾದನೆ ಬಂದಿಲ್ಲ. ಇದು ರಾಜಕೀಯ ಪ್ರೇರಿತ ಅನ್ನೋ ನೋವಾಗಿದೆ. ರಾಜ್ಯಪಾಲರು ಕ್ಯಾಬಿನೆಟ್ ನಿರ್ಣಯ ಪಾಲಿಸಬೇಕು ಅನ್ನೋ ಮಾತಿಗೆ ಒಪ್ಪಬೇಕಿಲ್ಲ. ವಿವೇಚನೆ ಬಳಸಬಹುದು ಅಂತಲೂ ಇದೆ. ಅದಕ್ಕೆ ಸಮರ್ಥನೆ ಕೂಡ ಕೊಡಬೇಕು. ತೀರ್ಪಿನಲ್ಲಿ ರಾಜ್ಯಪಾಲರ ನಿರ್ಧಾರಕ್ಕೆ ಸಮರ್ಥನೆ ಕಾಣಲಿಲ್ಲ. ಜಡ್ಜ್ಮೆಂಟ್‌ನಲ್ಲಿ ಸಮರ್ಥನೆ ಇದೆ ಎಂದಿದ್ದಾರೆ. ಕೋರ್ಟ್ ತೀರ್ಪು ನಮಗೆ ಸಮಾಧಾನ ತಂದಿಲ್ಲ ಎಂದು ಹೇಳಿದರು.

ರಾಜ್ಯಪಾಲರಿಗೆ ಬಲ ಬಂದಿದೆ ಅನ್ನಬಹುದು. ಆದರೆ ಇದು ಎಲ್ಲರಿಗೂ ಅನ್ವಯವಾಗಬೇಕಲ್ಲ. ಮಾಜಿ ಸಿಎಂ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ ಎಲ್ಲರ ವಿಚಾರದಲ್ಲಿಯೂ ಇರಬೇಕಲ್ವಾ. ಆ ಬಲ ಅಲ್ಲಿಯೂ ಉಪಯೋಗಿಸಬೇಕಲ್ಲ ಎಂದು ಪ್ರಶ್ನಿಸಿದರು. ಜನಪ್ರತಿನಿಧಿ ಕೋರ್ಟ್‌ನಲ್ಲಿ ಏನಾಗುತ್ತೋ ಗೊತ್ತಿಲ್ಲ. ನ್ಯಾಯಯುತ ತೀರ್ಪು ಬರುತ್ತದೆ ಅನ್ನುವ ವಿಶ್ವಾಸವಿದೆ. ಪಕ್ಷದ ತೀರ್ಮಾನದ ಮೇಲೆ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು.

ಸಿಎಂ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಬಿಜೆಪಿ ಉದ್ದೇಶವೇ ಸಿಎಂ ರಾಜೀನಾಮೆ ಕೊಡಿಸಬೇಕು ಅನ್ನೋದು. ಹಾಗಾಗಿ ಅವರ ಹೋರಾಟ ಆಶ್ಚರ್ಯ ಏನಿಲ್ಲ. ರಾಜೀನಾಮೆ ಕೊಡಬೇಡಿ ಎಂದು ನಾವು ಈಗಾಗಲೇ ಸಿಎಂಗೆ ಹೇಳಿದ್ದೇವೆ ಎಂದರು.

ಹೈಕಮಾಂಡ್ ಸಿಎಂ ಜೊತೆಗಿದೆ. ಈಗಾಗಲೇ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಇಬ್ಬರೂ ಹೇಳಿದ್ದಾರೆ. ಹೈಕಮಾಂಡ್ ಸಹ ಇದನ್ನು ಸ್ಪಷ್ಟಪಡಿಸಿದೆ. ನಾವೆಲ್ಲಾ ಸಿಎಂ ಬೆನ್ನಿಗೆ ನಿಂತಿದ್ದೇವೆ. ಗವರ್ನರ್ ಅವರು ತಮ್ಮ ಬಲವನ್ನು ಕುಮಾರಸ್ವಾಮಿ, ನಿರಾಣಿ ವಿಚಾರದಲ್ಲೂ ತೋರಿಸಬೇಕು ಎಂದು ಡಾ.ಜಿ.ಪರಮೇಶ್ವರ ಆಗ್ರಹಿಸಿದರು.

By Veeresh

Leave a Reply

Your email address will not be published. Required fields are marked *

Verified by MonsterInsights