
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಿಎಂ–ಡಿಸಿಎಂ ಕುರ್ಚಿ ಪೈಪೋಟಿ ನಡುವೆಯೇ ಮತ್ಸ್ಯ ಮೇಳದಲ್ಲಿ ಇಬ್ಬರೂ ನಾಯಕರು ಒಂದೇ ವೇದಿಕೆಯನ್ನು ಹಂಚಿಕೊಂಡದ್ದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ವಿಶ್ವ ಮೀನುಗಾರಿಕೆ ದಿನಾಚರಣೆ -2025 ನಿಮಿತ್ತ ಹೆಬ್ಬಾಳದಲ್ಲಿ ಮತ್ಸ್ಯ ಮೇಳ ನಡೆಯುತ್ತಿದೆ. ನವೆಂಬರ್ 21 ರಿಂದ ಆರಂಭವಾಗಿರುವ ಈ ಕಾರ್ಯಕ್ರಮವು ನಾಳೆಯವರೆಗೆ ನಡೆಯಲಿದೆ. ನಗದಿಯಂತೆ ಇವತ್ತಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಆಗಮಿಸಿದ್ದಾರೆ.

ಮೀನುಗಾರರ ದೊಡ್ಡ ಸಮೂಹದ ನಡುವೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೀನಗಾರಿಕೆ ದೇಶದ ಅತ್ಯಂತ ಕಷ್ಟದ ಉದ್ಯೋಗ. ಭಾರತದ 7.7% ಮೀನು ಉತ್ಪಾದನೆಯ ಅಂಕಿ–ಅಂಶ, ರಫ್ತು ಕ್ಷೇತ್ರದಲ್ಲಿ ದೇಶದ ನಾಲ್ಕನೇ ಸ್ಥಾನ, ಮತ್ತು ಕರಾವಳಿಯ 320 ಕಿಮೀ ಉದ್ದದ ಸವಾಲು–ಸಾಧ್ಯತೆಗಳ ಬಗ್ಗೆ ವಿವರಿಸಿದರು. ನನಗೂ ಮೀನು ಹಿಡಿಯಲು ಬರುತ್ತದೆ ಎಂದು ಹೇಳಿ ಜನರಿಂದ ಚಪ್ಪಾಳೆ ಗಳಿಸಿದ ಸಿಎಂ, ಮೀನುಗಾರಿಕೆಯನ್ನು ಉದ್ಯೋಗ, ಆರ್ಥಿಕ ವೃದ್ಧಿ ಮತ್ತು ಕುಟುಂಬಗಳ ಬದುಕು ಕಟ್ಟುವ ಬೃಹತ್ ತಳಹದಿ ಎಂದು ಪದೇ ಪದೇ ಒತ್ತಿಹೇಳಿದರು.

ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಮೀನುಗಾರಿಕೆಗೆ ಅವಲಂಬಿತರಾಗಿದ್ದಾರೆ ಎಂಬ ವಿಚಾರವನ್ನು ನೆನಪಿಸಿಕೊಂಡ ಸಿಎಂ ಸರ್ಕಾರ ಈ ವಲಯಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.



