ಸಿಗರೇಟು..ಬಿರಿಯಾನಿ…ಪಾತಕಿಗಳು ಸಹವಾಸ. ಎಲ್ಲವೂ ಸಾರಥಿಯನ್ನು ಅಡ್ಡಡ್ಡ ಉದ್ದುದ್ದ ಮಲಗಿಸಲಿವೆ. ಕೇಸು…ವಿಚಾರಣೆ…ಎಲ್ಲವೂ ಮುಗಿಬೀಳಲಿವೆ. ಇಡೀ ಸರ್ಕಾರ ಈಗ ದರ್ಶನ್ ಅಂಡ್ ಗ್ಯಾಂಗ್ ಹೆಡಮುರಿಗೆ ಕಟ್ಟಲಿದೆ. ಅದರ ಪರಿಣಾಮ ಏನಾಗಲಿದೆ ? ಕೊಲೆ ಆರೋಪ…ಜೊತೆಗೆ ಇದು. ಯಜಮಾನ ಈಗ ಗಳಗಳ…ಏನಿದು ಕಥನ…ನೀವೇ ನೋಡಿ…

ಹಿಂಡಲಗಾ ಜೈಲು….ಕತ್ತಲಕೋಣೆ…ದರ್ಶನ್ ದಿಕ್ಕಾಪಾಲು !

ಸಿಗರೇಟು…ಎಣ್ಣೆ…ಬಿರಿಯಾನಿ ಆಸೆ…ಸಾರಥಿ ಕಂಗಾಲು !

ಶನಿದೇವ ಕಾಲು ಮುರುಕೊಂಡು ಮನೆ ಮೂಲೆಯಲ್ಲಿ ಮಲಗಿರುವಾಗ ಹೀಗೇ ಆಗುತ್ತದೆ. ಆ ಸಮಯದಲ್ಲಿ ಸ್ವಲ್ಪ ಕಾಯಬೇಕು, ತಾಳ್ಮೆಯನ್ನು ಕಲಿಯಬೇಕು, ನಾಲಿಗೆ ಮೇಲೆ ನಿಗಾ ಇರಬೇಕು…ಇದೆಲ್ಲ ಇದ್ದಿದ್ದರೆ ಇಂದು ದರ್ಶನ್ ಮತ್ತೆ ಮತ್ತೆ ಊರ ಬಾಯಿಗೆ ಎಲೆ ಅಡಿಕೆ ಆಗುತ್ತಿರಲಿಲ್ಲ. ಸಿಗರೇಟು ಬಿಡಲ್ಲ….ಎಣ್ಣೆ ಮರೆಯಲ್ಲ…ಚಾಕಣಾ ಬೇಕೇಬೇಕು…ಬಿರಿಯಾನಿ ಇಲ್ಲದಿದ್ದರೆ ಹೊಟ್ಟೆ ಕೇಳಲ್ಲ…ಹೀಗೆ ದೇಹಕ್ಕೆ ಮಾತು ಕಲಿಸದ ಪರಿಣಾಮ ಈಗ ದರ್ಶನ್ ಗತಿಗೆ ಕರುನಾಡು ಬಿದ್ದು ಬಿದ್ದು ನಗುತ್ತಿದೆ.

ಕೈಗೊಬ್ಬ ಕಾಳಿಗೊಬ್ಬ ಆಳು. ಕೇಳಿದ್ದನ್ನು ತಂದುಕೊಡುವ ಚೇಲಾಗಳು…ಅಲ್ಲಿಂದ ಬಿರಿಯಾನಿ…ಇಲ್ಲಿಂದ ಚಾಕಣಾ…ಮತ್ತೊಂದು ಕಡೆಯಿಂದ ಎಗ್ ರೈಸು…ಹೀಗೆ ತಿಂದುAಡ ಬೆಳೆದ ದೇಹಕ್ಕೆ ಹಠ ಕಲಿಸಲಿಲ್ಲ. ಜೈಲಿಗೆ ಹೋದ ಮೇಲೂ ಅದನ್ನೇ ಮುಂದುವರೆಸಿದರು. ಅದಕ್ಕೆಲ್ಲ ಸಹಾಯ ಮಾಡಿದ್ದು ಪಾತಕಿ ಲೋಕ. ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ…ಹೀಗೆ ಕೆಲವರು ದರ್ಶನ್ ಪಕ್ಕ ಕುಳಿತು ಕೇಕೆ ಹಾಕಿದರು. ಇನ್ಯಾರು ನನ್ನ ಹಿಡಿಯೋರು…ದಚ್ಚು ಗಹಗಹಿಸಿದರು. ಈಗ ಪೊಲೀಸರು ಹೆಡಮುರಿಗೆ ಕಟ್ಟಿ ಕತ್ತಲ ಕೋಣೆಗೆ ಕಳಿಸಲಿದ್ದಾರೆ.

ಪರಪ್ಪನ ಅಗ್ರಹಾರಕ್ಕೆ ಇದೇನೂ ಹೊಸದಲ್ಲ. ಕಾಸು ಕೊಟ್ಟರೆ ಎಣ್ಣೆ ಸಿಗರೇಟು, ಡ್ರಗ್ಸು, ಮಸಾಜು…ಎಲ್ಲವೂ ಸುಲಭವಾಗಿ ಸಿಗುತ್ತವೆ. ಅದರಿಂದಲೇ ಲಕ್ಷ ಲಕ್ಷ ಹಣವನ್ನು ಜೈಲಾಧಿಕಾರಿಗಳ ಪಡೆ ಗಳಿಸುತ್ತದೆ. ಒಂದೇ ಒಂದು ಸಿಗರೇಟಿಗೆ ಐದು ನೂರು ರುಪಾಯಿ ಅಂದರೆ ನೀವು ನಂಬಲೇಬೇಕು. ಒಂದು ಕಟ್ ಬೀಡಿಗೆ ಐನೂರು. ಐದು ಬಿರಿಯಾನಿ ಆರ್ಡರ್ ಮಾಡಿದರೆ ಎರಡು ಬಿರಿಯಾನಿ ಪ್ಯಾಕೆಟ್ ಸೆಲ್‌ಗೆ ತಲುಪುತ್ತದೆ. ಉಳಿದ ಮೂರು ಸಿಪಾಯಿ ಪಾಲು…ಅದರಲ್ಲಿ ಅನುಮಾನ ಇಲ್ಲ.

ಇನ್ನು ಬ್ಯಾರಕ್ ವಿಷಯಕ್ಕೆ ಬರೋಣ. ಸ್ಪೆಶಲ್ ಕೋಣೆಗೆ ಲಕ್ಷ ಲಕ್ಷ ಕೊಡಬೇಕು. ತಿಂಗಳಿಗೆ ಇಷ್ಟು. ವರ್ಷಕ್ಕೆ ಇಷ್ಟು ಲಕ್ಷ. ಟಿವಿ ಬೇಕಾ, ಫ್ರಿಜ್ ಬೇಕಾ…ಎಲ್ಲವೂ ಅಂಗೈಲ್ಲಿದೆ. ಆದರೆ ಕಾಸು ಬಿಚ್ಚಬೇಕು. ಇದನ್ನು ಅಲ್ಲಿರುವ ರೌಡಿ ಗ್ಯಾಂಗು ಹವ್ಯಾಸ ಮಾಡಿಕೊಂಡಿದೆ. ವಿಲ್ಸನ್ ಗಾರ್ಡನ್ ನಾಗ ತಿಂಗಳಿಗೆ ಹತ್ತು ಲಕ್ಷ ಖರ್ಚು ಮಾಡುತ್ತಾನೆ. ಒಳಗೆ ಇದ್ದುಕೊಂಡೇ…ವಾರಕ್ಕೆ ರೇಶನ್‌ಗೆ ಆತ ಬಿಚ್ಚುವುದು ಕೇವಲ ಇಪ್ಪತ್ತು ಸಾವಿರ. ಇದು ಪರಪ್ಪನ ಅಗ್ರಹಾರದ ಅಧಿಕಾರಿಗಳು ನೀಡಿದ ವರ…

ದರ್ಶನ್ ಒಳಗೆ ಹೆಜ್ಜೆ ಇಟ್ಟಾಗ ಎರಡು ಗ್ಯಾಂಗ್ ನಡುವೆ ಹಣಾಹಣಿ ಶುರುವಾಯಿತು. ದರ್ಶನ್ ಪಟಾಲಾಂಗೆ ನಾವು ನೋಡಿಕೊಳ್ಳುತ್ತೇವೆ ಎನ್ನುವುದು ಅದಕ್ಕೆ ಕಾರಣ. ಕೊನೆಗೆ ನಾಗನೆ ಗೆದ್ದ. ಎರಡೇ ದಿನಕ್ಕೆ ದರ್ಶನ್ ಹೂಂಕರಿಸಿದರು. ನಿತ್ಯ ಬಿರಿಯಾನಿ, ಸಿಗರೇಟು, ಬೇಕಾದಾಗ ಕಾಫಿ…ಟೀ…ಇದು ಮೇಲುನೋಟಕ್ಕೆ ಕಂಡಿದ್ದು…ರಾತ್ರಿ ಹೊತ್ತು…ಇನ್ನೇನೇನು ಸರಬರಾಜಾಗುತ್ತಿತ್ತೋ ಯಾರಿಗೆ ಗೊತ್ತು ? ಗಾಂಜಾನೇ ಸಿಗುತ್ತಿರುವಾಗ ಎಣ್ಣೆ ಸಿಗದಿರುತ್ತಾ ? ಅಲ್ಲಿಂದಲೇ ದಚ್ಚು ನಿರಾಳ…ಈಗ ಅದೇ ತಂದಿಟ್ಟಿದ್ದೇ ಉರುಳಾ…

ವಾ.ಓ: ಇದುವರೆಗೆ ಜೈಲು ಅಧಿಕಾರಿಗಳು ಕರುನಾಡಿನ ಜನರನ್ನು ಹೇಗೆ ಹಾದಿ ತಪ್ಪಿಸಿದವೋ ನೋಡಿ. ಜೈಲೂಟ ಸೇರುತ್ತಿಲ್ಲ. ಮನೆ ಊಟ ಕೊಡಿ ಎಂದು ದರ್ಶನ್ ಅರ್ಜಿ ಹಾಕುವಂತೆ ಮಾಡಿದರು. ಅದಕ್ಕೆ ಕೊಟ್ಟ ಕಾರಣ ಕೂಡ ಇವರ ಮೆಧಾವಿತನಕ್ಕೆ ಸಾಕ್ಷಿ. ಮೈ ತೂಕ ಇಳಿಯುತ್ತಿದೆ., ಆರೋಗ್ಯ ಹದಗೆಟ್ಟು ಕೆಂಗೇರಿ ಮೋರಿ ಸೇರುತ್ತಿದೆ, ಕೆಲವೇ ದಿನಗಳಲ್ಲಿ ಬರಬಾರದ ಖಾಯಿಲೆ ಬರಲಿದೆ…ಹೀಗೆ ಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ದರ್ಶನ್ ರಂಗೋಲಿ ಹಾಕಿದ್ದೇ ಹಾಕಿದ್ದು…ಅಂಧಾಭಿಮಾನಿಗಳು…ಅಯ್ಯೋ ಪಾಪ ಎಂದು ಊಟ ಬಿಟ್ಟು ಬಿಕ್ಕಿದ್ದೆಷ್ಟೋ…?

ಆದರೆ ಇದೆಲ್ಲ ನಾಟಕ ಅಲ್ಲ, ದರ್ಶನ್ ಅಂಡ್ ಜೈಲಾಧಿಕಾರಿಗಳು ರಚಿಸಿದ ಮಹಾ ನಾಟಕ ಎನ್ನುವುದು ಈಗ ಹೊರ ಬಿದ್ದಿದೆ. `ನಮ್ಮ ಜೈಲೂಟದಲ್ಲಿ ಪೌಷ್ಠಿಕಾಂಶ ತುಂಬಿತುಳುಕಾಡುತ್ತಿದೆ. ಅದನ್ನೇ ಎಲ್ಲ ಖೈದಿಗಳಿಗೂ ಕೊಡುತ್ತೇವೆ, ಮನೆ ಊಟ ಅಗತ್ಯ ದರ್ಶನ್‌ಗೆ ಇಲ್ಲ…’ ಹೀಗಂತ ಜೈಲು ಅಧಿಕಾರಿಗಳು ಕುಂಟಾಬಿಲ್ಲೆ ಆಡಿದ್ಧೇ ಆಡಿದ್ದು…ಅದನ್ನು ಜನರು ನಂಬಿದ್ದೇ ನಂಬಿದ್ದು. ಈಗ ಅದೇ ಅಧಿಕಾರಿಗಳನ್ನು ಮೂಲೆಗೆ ತಳ್ಳಿಗೆ ಸರ್ಕಾರ.

ಯಾವಾಗ ಸಿಗರೇಟ್ ಹೊಡೆಯುವ ಫೋಟೊ ಹೊರಬಿತ್ತೋ…ವಿಲನ್ಸ್ ಗಾರ್ಡನ್ ನಾಗ ಕೆಂಡಾಮAಡಲವಾಗಿದ್ಧಾನೆ. ಇದನ್ನು ತೆಗೆದಿದ್ದು ವೇಲು. ಸಹಚರ. `ನಮ್ ನಾಗ…ದರ್ಶನ್ ಜೊತೆ ಇದ್ದಾನೆ…ನೋಡಿ…’ ಹೀಗಂತ ಬಿಲ್ಡಪ್ ಕೊಡಲು ಹೋಗಿ ಎಕ್ಕಾಮಕ್ಕಾ ಬಾರಿಸಿಕೊಂಡಿದ್ದಾನೆ. ವೇಲುಗೆ ನಾಗ ಬೆಲ್ಟ್ನಿಂದ ಹೊಡೆದಿದ್ದಾನೆ. ಅದೇ ರೀತಿ ಇನ್ನುಳಿದ ಹದಿನೈದು ಜನರಿಗೂ ಇಕ್ಕಿದ್ದಾನೆ. ಜೈಲಿನಲ್ಲಿ ಪೊಲೀಸರು ಖೈದಿಗಳಿಗೆ ಹೊಡೆಯುವುದು ಗೊತ್ತು. ಆದರೆ ಕೊಲೆಗಡುಕನೇ ಇನ್ನೊಬ್ಬ ಕೊಲೆಗಡುಕನಿಗೆ ಹೊಡೆದಿದ್ದಾನೆ. ಶಬ್ಬಾಶ್ ಪರಪ್ಪನ ಅಗ್ರಹಾರ…

ದರ್ಶನ್ ಬಂಧಿಖಾನೆ ಬಿಟ್ಟು ಈಚೆ ಬರದಂತೆ ಇನ್ನಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾರು ಕೂಡ ದರ್ಶನ್ ಜೊತೆ ಮಾತಾಡಬಾರದು. ಜೈಲೂಟ ಬಿಟ್ಟು ಇನ್ನೇನೂ ಆತನಿಗೆ ಕೊಡಬಾರದು. ಆತನನ್ನು ಮೀಟ್ ಮಾಡಲು ಬರೋರ ಬಗ್ಗೆಯೂ ನಿಗಾ ಇಟ್ಟಿರಬೇಕು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ದರ್ಶನ್‌ಗೆ ಅಸಲಿ ಜೈಲಿನ ದರ್ಶನ ಇನ್ನು ಮುಂದೆ ಆಗಲಿದೆ. ಆಗಲೇಬೇಕು. ಕೊಲೆ ಆರೋಪ ಹೊತ್ತು ಅಗುಳಿನಷ್ಟೂ ಪಾಪಪ್ರಜ್ಞೆ ಇಲ್ಲದವರಿಗೆ ಇನ್ಯಾವ ರೀತಿ ಶಿಕ್ಷೆ ಕೊಡಬೇಕು…ಅಲ್ಲವೆ ?

ಸಿಕ್ಕಿದ್ದೇ ಚಾನ್ಸು…ಹೀಗಂತ ಅಂದುಕೊAಡು ಕೊಲೆಗಡುಕ ನಾಗನ ಜೊತೆ ಕುಂತಿದ್ದೇ ತಡ…ಬುಡಕ್ಕೆ ಬಿಸಿ ನೀರು ಬಿಡಲು ಖಾಕಿ ಸಜ್ಜಾಗಿದೆ. ಪರಿಣಾಮ ಏನು ಗೊತ್ತೆ ? ಬೆಳಗಾವಿಯ ಹಿಂಡಲಗಾ ಜೈಲಿಗೆ ಹಾಕಲಿದೆ. ಅದರಲ್ಲೇನು ವಿಶೇಷ ? ಅದೂ ಜೈಲೇ ಇದೂ ಜೈಲೇ ಅಲ್ಲವಾ ? ಇಲ್ಲ…ನಿಮ್ಮ ಊಹೆ ತಪ್ಪು. ನೂರು ವರ್ಷದ ಇತಿಹಾಸ ಇದೆ ಇದಕ್ಕೆ. ಈ ಜೈಲಿನಲ್ಲಿ ಮೊದಲು ಸ್ವತಂತ್ರ ಹೋರಾಟಗಾರರನ್ನು ಬಂಧಿಗಳಾಗನ್ನಾಗಿಸುತ್ತಿದ್ದರು. ಆಮೇಲೆ ನಟೋರಿಯಸ್ ಕ್ರಿಮಿನಲ್‌ಗಳನ್ನು ಇದರಲ್ಲಿ ಹಾಕಲಾಗುತ್ತಿದೆ. ದರ್ಶನ್ ಕೂಡ ನಟೋರಿಯಸ್ ಸಾಲಿನಲ್ಲಿ ನಿಲ್ಲುತ್ತಾರಾ ?

ದಂಪುಪಾಳ್ಯ ಗ್ಯಾಂಗ್, ಸೈನೈಡ್ ಮಲ್ಲಿಕಾ, ಇಸೀಸ್ ಉಗ್ರರು, ವೀರಪ್ಪನ್ ಸಹವರ್ತಿಗಳು, ಭೂಗತ ಪಾತಕಿ ಬನ್ನಂಜೆ ರಾಜ, ಉಗ್ರ ಅಕ್ಬರ್ ಪಾಶಾ…ಹೀಗೆ ಅನೇಕರು ಇಲ್ಲಿದ್ದಾರೆ. ಇಲ್ಲಿರುವ ಅಂಧೇರಿ ಸೆಲ್‌ನಲ್ಲಿ ಒದ್ದಾಡುತ್ತಿದ್ದಾರೆ. ಮೂವತ್ತಾರು ಅಂಧೇರಿ ಸೆಲ್‌ನಲ್ಲಿ ನಟೋರಿಯಸ್ ರೌಡಿಗಳನ್ನು ಇಡಲಾಗಿದೆ. ಐದು ಪಾಳೆಯದಲ್ಲಿ ಸಿಬ್ಬಂದಿ ನಿಗಾ. ಆರು ಸಿಸಿ ಕ್ಯಾಮೆರಾ…ಇಪ್ಪತ್ಮಾಲ್ಕು ಗಂಟೆ ಕಣ್‌ಗಾವಲು…ಜೈಲೂಟ ಬಿಟ್ಟು ಇನ್ನೊಂದಿಲ್ಲ…ಹೊರಗೆ ಓಡಾಡುವಂತಿಲ್ಲ. ಹುಚ್ಚು ಹಿಡಿಯೋದು ಬಾಕಿ…ಅಲ್ಲಿದ್ದರೆ. ಈಗ ದರ್ಶನ್‌ಗೆ ಕತ್ತಲಕೋಣೆ ವರ…

ಈಗ ಹದಿನೈದು ಅಂಧೇರಿ ಸೆಲ್ ಅಂದರೆ ಕತ್ತಲಕೋಣೆ ಖಾಲಿ ಇವೆ. ಅದರಲ್ಲಿ ದರ್ಶನ್‌ಗೆ ಜಾಗ ಮಾಡಿಕೊಡಲು ಸಿದ್ಧತೆ ನಡೆಸಿದ್ದಾರೆ ಪೊಲೀಸರು. ಅದಕ್ಕೆ ಕೋರ್ಟ್ ಅನುಮತಿ ಬೇಕು. ಯಾವ ಕಾರಣಕ್ಕೆ ಅಲ್ಲಿಗೆ ಕಳಿಸುತ್ತಿದ್ದೀರಿ ಎನ್ನುವುದಕ್ಕೆ ನಿಖರ ಕಾರಣ ಕೊಡಬೇಕು. ನಂತರ ಅಂತಿಮ ತೀರ್ಮಾನ. ಹಿಂಡಲಗಾದ ಅಂಧೇರಿ ಸೆಲ್‌ನಲ್ಲಿ ಹಾಕಿದ ಮೇಲಾದರೂ ದರ್ಶನ್ ಇದೆಲ್ಲ ಮದ ಬಿಡುತ್ತಾರಾ ? ಆಥವಾ ಹಳೇ ದೌಲತ್ತಿನಲ್ಲೇ ಜೀವನ ನಡೆಸುತ್ತಾರಾ ? ನೋಡೋಣ…ಬಿಡಿ…
-ಮಹೇಶ್ ದೇವಶೆಟ್ಟಿ, ಫಿಲ್ಮ್ಬ್ಯೂರೊ, ಫ್ರೀಡಂ ಟಿವಿ

 

 

 

 

 

Leave a Reply

Your email address will not be published. Required fields are marked *

Verified by MonsterInsights