ವೈರಲ್ ನ್ಯೂಸ್ಸುದ್ದಿ

ಹೆತ್ತವರಿಗೆ ಅನ್ನ ನೀಡದ ಮಕ್ಕಳು; ವೃದ್ಧ ದಂಪತಿಯ ದಾರುಣ ಆತ್ಮಹತ್ಯೆ

ಕೊಡಗು: ಹೆತ್ತವರನ್ನು ದೇವರೆಂದು ಪೂಜಿಸುವ ಸಂಸ್ಕೃತಿಯಲ್ಲಿ, ಆಸ್ತಿ ಮಾಡಿ ಮಕ್ಕಳನ್ನು ನೆಲೆಗೊಳಿಸಿದ ತಂದೆ-ತಾಯಿಯೇ ತುತ್ತು ಅನ್ನಕ್ಕಾಗಿ ಪರದಾಡಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆಯ ಡೇನಿಯಲ್ ಅವರು ಮೇಸ್ತ್ರಿ ಕೆಲಸ ಮಾಡಿ, ಕಷ್ಟಪಟ್ಟು ಕಾಫಿ ತೋಟ ಹಾಗೂ ಆಸ್ತಿ ಸಂಪಾದಿಸಿ ಇಬ್ಬರು ಗಂಡು ಮಕ್ಕಳನ್ನು ಬೆಳೆಸಿದ್ದರು. ಮಕ್ಕಳಿಗೆ ಮದುವೆ ಮಾಡಿ ಜೀವನ ರೂಪಿಸಿಕೊಟ್ಟರೂ, ವಯಸ್ಸಾದ ಕಾಲದಲ್ಲಿ ಮಕ್ಕಳು ತಂದೆ-ತಾಯಿಯನ್ನು ಕಡೆಗಣಿಸಿದ್ದಾರೆ. ಸರಿಯಾದ ಆಹಾರ ನೀಡದೆ, ಅನಾರೋಗ್ಯದ ಸಮಯದಲ್ಲಿ ಚಿಕಿತ್ಸೆ ಕೊಡಿಸದೆ ಕ್ರೂರವಾಗಿ ವರ್ತಿಸಿದ್ದಾರೆ. ಈ ಅವಮಾನ ಮತ್ತು ಹಸಿವಿನಿಂದ ಬೇಸತ್ತ ದಂಪತಿ ವೃದ್ಧಾಶ್ರಮ ಸೇರಿದರೂ, ಅಲ್ಲಿನ ಜೀವನಕ್ಕೆ ಹೊಂದಿಕೊಳ್ಳಲಾಗದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಅಂತಿಮವಾಗಿ ಹಾಸನದ ರೈಲ್ವೆ ಹಳಿಗಳ ಮೇಲೆ ಮಲಗಿ ತಮ್ಮ ಜೀವನವನ್ನು ಕೊನೆಗಾಣಿಸಿಕೊಂಡಿದ್ದಾರೆ.

ದುರಂತವೆಂದರೆ, ಪೋಷಕರು ಮೃತಪಟ್ಟ ಸುದ್ದಿ ತಿಳಿದ ಮೇಲೂ ಮಕ್ಕಳು ಅಂತಿಮ ಸಂಸ್ಕಾರಕ್ಕೆ ಬರಲು ಹಿಂದೇಟು ಹಾಕಿದ್ದಾರೆ. ಪೊಲೀಸರ ತರಾಟೆಯ ನಂತರ ಶವಾಗಾರಕ್ಕೆ ಬಂದರೂ, ಸತ್ತವರ ಬಗ್ಗೆ ಕನಿಷ್ಠ ವಿಷಾದವಿಲ್ಲದೆ ತಂದೆಯ ಮೇಲೆಯೇ ಆರೋಪ ಹೊರಿಸಿರುವುದು ಇಂದಿನ ಕಾಲದ ಕಟು ವಾಸ್ತವವನ್ನು ತೋರಿಸುತ್ತಿದೆ. ಸ್ವಂತ ರಕ್ತದ ಸಂಬಂಧಗಳೇ ಮೃಗೀಯವಾಗಿ ವರ್ತಿಸಿದಾಗ ಅನಾಥರಂತೆ ಬದುಕು ಮುಗಿಸಿದ ಈ ದಂಪತಿಯ ಸಾವು ಸಮಾಜಕ್ಕೆ ದೊಡ್ಡ ಎಚ್ಚರಿಕೆಯಾಗಿದೆ.

Comments (0)

Your email address will not be published. Required fields are marked *

Back to top button