ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದೆ. ಇದು ಯಾರೂ ಒಪ್ಪದ ವಿಚಾರವಾಗಿದ್ದು ಇವತ್ತು ಸಂಸದ ಬಿ.ಎನ್ ಬಚ್ಚೇಗೌಡರು ಕರೆದಿದ್ದ ದಿಶಾ ಸಭೆಯಲ್ಲಿ ಸ್ಪೋಟಗೊಂಡಿದೆ. ಇಡೀ ಜಿಲ್ಲೆಯ ಬೆಚ್ಚಿ ಬೀಳುವ ಸುದ್ದಿ ಇದಾಗಿದ್ದು ಇದನ್ನು ಖುದ್ದು ಸಂಸದರೇ ಬಹಿರಂಗಪಡಿಸಿದ್ದಾರೆ.
ಇಡೀ ಜಿಲ್ಲೆಯಲ್ಲಿ ಕಾನೂನು ವಿರೋಧಿ ಚಟುವಟಿಕೆಗಳು ಸಾಮಾನ್ಯವಾಗಿ ನಡೀತಾನೇ ಇದೆ. ಈ ಪೈಕಿ ಬಾಲಗರ್ಭಿಣಿ ಪ್ರಕರಣ ಈಗ ಇಡೀ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ. ಒಂದು ವರದಿಯ ಪ್ರಕಾರ ಇಡೀ ಜಿಲ್ಲೆಯಾಧ್ಯಂತ ಪ್ರಕರಣಗಳನ್ನು ಪತ್ತೆ ಹಚ್ಚಿದಾಗ ಒಟ್ಟು 39 ಪ್ರಕರಣಗಳು ಬಾಲಗರ್ಭಿಣಿ ಪ್ರಕರಣಗಳು ವರದಿಯಾಗಿರುವುದು ಬಹಿರಂಗಗೊಂಡಿದೆ.
ಇನ್ನು ಪ್ರಕರಣ ವರದಿಯಾಗದ ಮತ್ತುಷ್ಟು ಸನ್ನಿವೇಶಗಳು ಜಿಲ್ಲೆಯಲ್ಲಿ ಇದೆ ಎನ್ನುವ ಊಹಾಪೋಹಗಳೂ ಇದೆ. ಆದ್ರೂ ಹದಿ ಹರೆಯದ ವಯಸ್ಸಿನಲ್ಲಿ ಗರ್ಭಿಣಿಯರಾಗ್ತಿರೋ ಬಾಲಕಿಯರ ಬಗ್ಗೆ ಇಡೀ ಜಿಲ್ಲಾಡಳಿತ ಕಂಗಾಲಾಗಿದೆ. ಹದಿನಾರು ವರ್ಷದ ಒಳಗಿನ ಬಾಲಕಿಯರು ಶಾಲೆ, ಸ್ಕೂಲಿಗೆ ಹೋಗುವ ಸಮಯದಲ್ಲಿ ತಮ್ಮ ಸ್ನೇಹಿತರ ಜೊತೆ ಸಂಪರ್ಕ ಹೊಂದಿ ಗರ್ಭಿಣಿಯಾಗಿರುವ ಪ್ರಕರಣಗಳ ಜೊತೆ ಪಾಠ ಹೇಳಿಕೊಡುವ ಉಪಾಧ್ಯಾಯರೇ ಬಾಲಕಿಯರನ್ನು ಬಳಸಿಕೊಂಡಿರುವ ಸನ್ನಿವೇಶಗಳು ಬಯಲಾಗಿದೆ. ಒಟ್ಟು 39 ಪ್ರಕರಣಗಳು ಈಗ ಜಿಲ್ಲೆಯಲ್ಲಿ ಅಧಿಕೃತವಾಗಿ ಹೊರಬಿದ್ದಿದ್ದು ಎಲ್ಲಾ ಪ್ರಕರಣಗಳನ್ನು ಕಾನೂನು ರೀತ್ಯಾ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರ ಇಲಾಖೆ ವರದಿ ನೀಡಿದೆ. ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದರಿಂದ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸದೆ ಗೌಪ್ಯವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಸಂಸದ ಬಚ್ಚೇಗೌಡ ತಿಳಿಸಿದ್ದಾರೆ.
ಇನ್ನು ಬಾಲ್ಯ ವಿವಾಹಗಳು ಕೂಡ ಜಿಲ್ಲೆಯಲ್ಲಿ ಹೆಚ್ಚಾಗಿದ್ದು ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯ ನಿರ್ವಹಸುತ್ತಿದ್ದರೂ ಅಧಿಕಾರಿಗಳ ಕಣ್ಣು ತಪ್ಪಿಸಿ ಇದುವರೆಗೂ ಅಕ್ರಮವಾಗಿ 89 ಬಾಲ್ಯವಿವಾಹಗಳು ನಡೆದಿರುವ ಅಘಾತಕಾರಿ ಸುದ್ದಿ ಕೂಡ ಹೊರಬಿದ್ದಿದೆ. ಇದು ಇಡೀ ಜಿಲ್ಲೆಯೇ ತಲೆ ತಗ್ಗಿಸುವ ವಿಚಾರವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ದಿಶಾ ಸಭೆಯಲ್ಲಿ ಸಂಸದ ಬಚ್ಚೇಗೌಡ ತಿಳಿಸಿದ್ದಾರೆ. ಒಟ್ಟು 165 ಪೋಕ್ಸೋ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಗಾಂಜಾ, ಅಪೀಮು Pಪ್ರಕರಣಗಳು ಜಿಲ್ಲೆಯಾಧ್ಯಂತ ವ್ಯಾಪಕವಾಗಿದ್ದು ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ.
ಚಂದ್ರು ಶಿಡ್ಲಘಟ್ಟ, ಫ್ರೀಡಂ ಟಿವಿ, ಚಿಕ್ಕಬಳ್ಳಾಪುರ