ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ನಟ ದರ್ಶನ್ ತೂಗುದೀಪ ಮತ್ತು ಅವರ ಆಪ್ತೆ ಪವಿತ್ರಾ ಗೌಡ ಸೇರಿದಂತೆ 15 ಮಂದಿಯನ್ನು ಬಂಧಿಸಿ ತನಿಖೆ ನಡೆಸುತ್ತಿರುವ ಪೊಲೀಸರ ತಂಡ ಇದೇ ವಾರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆ ಇದೆ.
ಬಿಗಿಯಾದ ಚಾರ್ಜ್ ಶೀಟ್ ರೂಪಿಸಲಾಗುತ್ತಿದೆ. ಅದು ಅಂತಿಮ ಹಂತದಲ್ಲಿದೆ. ತನಿಖಾ ತಂಡ ಕೆಲವು ವಿಧಿವಿಜ್ಞಾನ ಮತ್ತು ಇತರ ತಾಂತ್ರಿಕ ವರದಿಗಳನ್ನು ನಿರೀಕ್ಷಿಸುತ್ತಿದೆ. ಅವುಗಳನ್ನು ಪಡೆದ ನಂತರ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ತನಿಖೆಯ ಭಾಗವಾಗಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರುTNIE ಗೆ ತಿಳಿಸಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಆರು ಪ್ರಮುಖ ಆರೋಪಿಗಳ ಬಟ್ಟೆಗಳ ಮೇಲೆ ಸಂತ್ರಸ್ತನ ರಕ್ತದ ಕಲೆಗಳನ್ನು ದೃಢಪಡಿಸಿದೆ. ಘಟನೆಯ ವೇಳೆ ಆರು ಆರೋಪಿಗಳು ಧರಿಸಿದ್ದ ಬಟ್ಟೆ, ಪಾದರಕ್ಷೆ ಮತ್ತು ಚರ್ಮದ ವಸ್ತುಗಳನ್ನು ಅವರ ಬಂಧನದ ನಂತರ ಅವರ ಮನೆಗಳಿಂದ ವಶಪಡಿಸಿಕೊಳ್ಳಲಾಗಿತ್ತು ಎಂದು ಅವರು ಹೇಳಿದರು.