‘ನನ್ನ ಪತಿಗೆ ಮೂರು ಸಿನಿಮಾಗಳಲ್ಲಿ ಚಾನ್ಸ್ ಕೊಟ್ಟಿರಲಿಲ್ಲ. ನನ್ನ ಗಂಡನಿಗೆ ಅವಕಾಶ ಕೊಡದಿದ್ದರೆ ನಿಮ್ಮ ಮನೆ ಮುಂದೆ ಮೂವರು ಮಕ್ಕಳೊಂದಿಗೆ ಪ್ರತಿಭಟನೆ ಮಾಡ್ತೇನೆ ಎಂದು ಪಾರ್ವತಮ್ಮ ರಾಜ್ ಕುಮಾರ್ ಅವ್ರಿಗೆ ಹೇಳಿದ್ದೆ. ಪಾರ್ವತಮ್ಮ ಅವರು ನನ್ನ ಪತಿಗೆ ರೋಲ್ ಕೊಟ್ಟರು. ಈಗ ನನ್ನ ಮಕ್ಕಳು ಬೆಳೆದು ಸದೃಢ ಮೈಕಟ್ಟು ಹೊಂದಿದ್ದಾರೆ ಎಂದರೆ ಅದಕ್ಕೆ ಡಾ.ರಾಜ್ ಕುಮಾರ್ ಮನೆ ಅನ್ನ ಕಾರಣ’.
ಇವು ಸ್ಟಾರ್ ನಟ ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಆಡಿದ್ದ ಮಾತುಗಳು. ಒಬ್ಬ ಮಗ ಸ್ಟಾರ್ ನಟ. ಅವನಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಮತ್ತೊಬ್ಬ ಮಗನೂ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದಾನೆ. ಇಂಥ ಹೊತ್ತಲ್ಲಿ ಮೀನಾ ತೂಗುದೀಪ್ ತನ್ನ ಬದುಕಿನ ಕಠೋರ ಸತ್ಯವನ್ನು ಸಾರ್ವಜನಿಕವಾಗಿ ಹೀಗೆ ಬಿಚ್ಚಿಟ್ಟಿದ್ದರು. ಉಂಡ ಮನೆಯ ಜಂತೆ ಎಣಿಸುವ ಜನರ ಮಧ್ಯೆ, ತನ್ನ ಪತಿಗೆ ಕೆಲಸ ಕೊಟ್ಟ ಮನೆತನದ ಉಪಕಾರ ಸ್ಮರಿಸಿ ದೊಡ್ಮನೆಯ ದೊಡ್ಡತನವನ್ನೂ ಮೀರಿ ನಿಂತಿದ್ದರು. ನಾಡಿನ ಜನರ ಮನಸ್ಸು ಗೆದ್ದಿದ್ದರು ದರ್ಶನ್ ತಾಯಿ.
ಸ್ವಲ್ಪ ಹಿಂದಕ್ಕೆ ಹೋದರೆ, ತನ್ನ ಪತಿ ತೂಗುದೀಪ್ ಶ್ರೀನಿವಾಸ್ ಗೆ ತನ್ನ ಒಂದು ಕಿಡ್ನಿ ನೀಡಿದ್ದ ಸಾವಿತ್ರಿ ಮೀನಾ. ನನ್ನಂಥವರು ಹತ್ತು ಮಂದಿ ಇದ್ದಾರೆ. ಆದರೆ, ಕನ್ನಡ ಸಿನಿಮಾರಂಗಕ್ಕೆ ಒಬ್ಬರೇ ತೂಗುದೀಪ್, ಅವರು ಉಳಿಯಬೇಕು ಎಂದಿದ್ದರು. ಈ ಮೂಲಕ ನೈತಿಕವಾಗಿ ಯಾರೂ ಏರಲಾರದ ಎತ್ತರಕ್ಕೆ ಏರಿದ್ದರು. ಬದುಕಲ್ಲಿ ನಿಯತ್ತು, ಬದ್ದತೆಗೆ ಸರಿಸಾಟಿಯಿಲ್ಲದೆ ಜೀವಿಸಿದ ಅಪ್ಪಟ ವಜ್ರದಂಥ ವ್ಯಕ್ತಿತ್ವದ ತಾಯಿ ಆಕೆ. ಇಂಥ ಮಹೋನ್ನತ ವ್ಯಕ್ತಿತ್ವದ ತಾಯಿಯ ಪ್ರೀತಿಯ ಮಗ ನಟ ದರ್ಶನ್.
ತನ್ನ ತಾಯಿಯ ಬಳುವಳಿಯೋ ಏನೋ, ದರ್ಶನ್ ಬಾಯಿಗೆ ಫಿಲ್ಟರ್ ಇಲ್ಲವೇ ಇಲ್ಲ. ಇದ್ದಿದ್ದು ಇದ್ದಂಗೇ ಮಾತಾಡ್ತಾರೆ. ನಂಬಿದವರಿಗೆ ಜೀವ ಕೊಡಲು ಮುಂದಾಗುವ ಗುಣ. ಲಾಭ ನಷ್ಟದ ಲೆಕ್ಕಾಚಾರ ಇಲ್ಲದೆ, ಸತ್ಯಕ್ಕೆ ಎದೆಕೊಟ್ಟು ದರ್ಶನ್ ಮಾಡಿಕೊಂಡ ಗಾಯಗಳೇನು ಕಮ್ಮಿಯಾ? ನರಿಗಳು, ರಣಹದ್ದುಗಳು, ವಂಚಕರು, ಪಾಖಂಡಿಗಳೇ ತುಂಬಿರುವ ಜಗತ್ತಿದು. ಇಂಥ ಜನರಿಂದ ನಿಯತ್ತು, ಬದ್ಧತೆಯನ್ನು ನಿರೀಕ್ಷೆ ಮಾಡಲು ಹೋಗಿ ಅವರು ಅನುಭವಿಸಿದ ವೇದನೆ ಬಹುತೇಕರಿಗೆ ಗೊತ್ತಿದೆ.
ಅನಾಗರಿಕರಿಂದ ಆದ ಗಾಯಗಳ ನೋವಿಗೆ ಪ್ರತಿಕ್ರಿಯಿಸುವ ಭರದಲ್ಲಿ ದರ್ಶನ್ ಅಪ್ರಿಯ ಸತ್ಯವನ್ನು ಅದೇ ಅನಾಗರಿಕ ಭಾಷೆಯಲ್ಲಿ ಹೇಳಲು ಹೋಗಿ ಮಾನಹಾನಿ, ಧನಹಾನಿ, ಕುಹಕ, ಜೈಲು, ಸೋಲು, ದುಷ್ಟಕೂಟಗಳ ಸಂಚುಗಳಿಗೆ ಬಲಿಯಾದರು. ಇದೀಗ ಅವರ ಗೆಳೆಯ ರಾಕ್ ಲೈನ್ ವೆಂಕಟೇಶ್ ದರ್ಶನ್ ರನ್ನು ಅವರ ಕಷ್ಟಕೂಪದಿಂದ ಮೇಲೆತ್ತಿದ್ದಾರೆ. ದರ್ಶನ್ ಅವರ ದುರ್ದಿನದ ಹೊತ್ತಲ್ಲೂ ರಿಸ್ಕ್ ತೆಗೆದುಕೊಂಡು ಹಣ ಹೂಡಿ ಉತ್ತಮ ಚಿತ್ರವೊಂದನ್ನು ಹೊರತಂದಿದ್ದಾರೆ. ಜತೆಗೆ ಮಾಧ್ಯಮದವರ ಜತೆ ದರ್ಶನ್ ಕೂರಿಸಿ ಕ್ಷಮೆ ಕೇಳಿಸಿ ರಿಲೀಸ್ ಗೆ ಮುನ್ನವೇ ಚಿತ್ರ ಗೆಲ್ಲಿಸಿದ್ದರು. ಹಲವು ವರ್ಷಗಳಲ್ಲಿ ಅತ್ಯಪರೂಪ ಎಂಬಂತೆ ಅದ್ಭುತ ಕತೆ, ಸೂಕ್ಷ್ಮ ಸಂಭಾಷಣೆಯ ಸದಭಿರುಚಿಯ ಚಿತ್ರವೊಂದಕ್ಕೆ ದರ್ಶನ್ ಜೀವ ತುಂಬಿದ್ದಾರೆ. ಕನ್ನಡಿಗರು ಕಾಟೇರನನ್ನು ಎದೆಗವಚಿ ಮುತ್ತಿಟ್ಟು ಗೆಲ್ಲಿಸಿದ್ದಾರೆ.
ಚಿತ್ರದ ಯಶಸ್ಸಿನ ಕುರಿತ ಸುದ್ದಿಗೋಷ್ಠಿಯಲ್ಲಿ ದರ್ಶನ್, ಕಿಡಿಗೇಡಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಡಾ. ರಾಜ್ ಕುಮಾರ್ ಅವರ ಕಾಲಿನ ಧೂಳಿಗೂ ಸಮ ನಾನಲ್ಲ ಎನ್ನುವ ಮೂಲಕ ತಾನು ನಿಗರ್ವಿ ಎಂಬುದನ್ನು ಬಿನ್ನವಿಸಿಕೊಂಡಿದ್ದಾರೆ. ಇದೇ ಹೊತ್ತಲ್ಲಿ ಕಿಡಿಗೇಡಿ ಅಭಿಮಾನಿಯೊಬ್ಬ ಮತ್ತೆ ದೊಡ್ಮನೆಯ ಹೆಸರು ಪ್ರಸ್ತಾಪಿಸಿ ಯಡವಟ್ಟು ಮಾಡಿದ್ದಾನೆ. ಇಂಥ ಕಿಡಿಗೇಡಿ ಪ್ರಶ್ನೆ ಹಾಗೂ ಇಂಥ ಕಿಡಿಗೇಡಿ ಅಭಿಮಾನಿಗಳೇ ದರ್ಶನ್ ನೆಮ್ಮದಿಗೆ ಕೊಳ್ಳಿ ಇಡುತ್ತಿವೆ. ಈ ರೀತಿಯ ಕಿಡಿಗೇಡಿತನಗಳೇ ಅಣ್ಣಾವ್ರು-ವಿಷ್ಣು ಸೇರಿ ಹಲವರ ನೆಮ್ಮದಿಗೆ ವಿಷ ಹಿಂಡಿದ ಕಾಲ ಗರ್ಭದ ಸತ್ಯ ನಮ್ಮೆದುರಿದೆ. ಇನ್ನಾದರೂ ಇಂಥ ಕಿಡಿಗೇಡಿಗಳ ಕಣ್ಣು ದರ್ಶನ್ ಮೇಲೆ ಬೀಳದಿರಲಿ.
ಮೊನ್ನೆಯಷ್ಟೇ ಸಿನಿ ಕ್ರಿಕೆಟ್ ಸೆಟ್ ನಲ್ಲಿ ಹಿರಿ ಕಿರಿಯ ನಟರೆಲ್ಲ ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ಇಬ್ಬರ ಪಾದ ಮುಟ್ಟಿ ನಮಸ್ಕರಿಸುತ್ತಿದ್ದರು. ಇದಕ್ಕೆ ಶಿವಣ್ಣರ ಹಿರಿತನ ಮಾತ್ರವಷ್ಟೇ ಕಾರಣವಾಗಿರಲಿಲ್ಲ. ಬದಲಿಗೆ ಹಸಿವು, ನೋವು, ನಿಂದನೆ, ಸೋಲು, ಗೆಲುವು, ಷಡ್ಯಂತ್ರ ಎಲ್ಲ ವೇಳೆಯೂ ನೋವು ನುಂಗಿ ಸಾಗಿದ ಆ ದೊಡ್ಮನೆಯ ಹಿಸ್ಟರಿ ಕಾರಣವಾಗಿತ್ತು.
ಅದೇ ರೀತಿ ಕನ್ನಡ ಸಿನಿಪ್ರಿಯರ ದಚ್ಚು ನಿಜಜೀವನದ ನೋವು ನುಂಗಲಿ. ಕಾಗೆಗಳಿಂದ ಕೋಗಿಲೆ ಕಂಠ ನಿರೀಕ್ಷೆ ಮಾಡುವುದು ಬೇಡ. ಹದ್ದಾಗಿ ಕುಕ್ಕಿದವರ ಕ್ಷಮಿಸಿ ನಕ್ಕು ಮುಂದೆ ಸಾಗಲಿ. ಅವರಿಂದ ಇಂಥ ಹಲವು ಚಿತ್ರಗಳು ಬರಲಿ. ಅಗ್ನಿ ದಿವ್ಯದಿಂದ ಕಾಟೇರ ಎದ್ದು ಬಂದಿದ್ದಾನೆ. ಇನ್ನೇನಿದ್ದರೂ ಗೆದ್ದು ನಿಲ್ಲುವ ಸಮಯ..!
ಕಡೆಯ ಮಾತು:
ಮಂಡ್ಯದ ರಸ್ತೆ ಮಧ್ಯೆ ರೋಷಾವೇಶದಲ್ಲಿ ಕೆರಳಿ ನಿಂತಿದ್ದ ಕೊಬ್ಬಿದ ಗೂಳಿಯನ್ನು ಪ್ರಚಾರದ ವ್ಯಾನ್ ನಿಂದ ಇಳಿದು ಬಳಿ ಸಾರಿ ಸ್ಪರ್ಶ ಮಾತ್ರದಿಂದಲೇ ಸಮಾಧಾನಿಸಿ ಗೆದ್ದಿದ್ದ ವಿಶಿಷ್ಟ ಶಕ್ತಿಯ ವ್ಯಕ್ತಿ ದರ್ಶನ್. ದರ್ಶನ್ ನಿಜವಾದ ಕ್ಯಾರೆಕ್ಟರ್ ಅನ್ನು ಅವರ ಫಾರ್ಮ್ ನಲ್ಲಿರುವ ಪ್ರಾಣಿಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಿದರಷ್ಟೇ ಅರ್ಥವಾಗಲು ಸಾಧ್ಯ.