ರಾಜ್ಯದಲ್ಲಿ ಪಾಕ್ ಜನರ ಪತ್ತೆ ಕೇಂದ್ರ ಸರ್ಕಾರದ ವೈಫಲ್ಯ: ಡಾ.ಪರಂ ಕಿಡಿ

ಹುಬ್ಬಳ್ಳಿ ಪಾಕಿಸ್ತಾನಿಯರು ಬೆಂಗಳೂರಿಗೆ ಬಂದು ಪಾಸ್‌ಪೋರ್ಟ್ ಮಾಡಿಸಿಕೊಳ್ಳುತ್ತಾರೆಂದರೆ ಏನರ್ಥ? ಇದಕ್ಕೆ ಕೇಂದ್ರ ಸರ್ಕಾರದ ತನಿಖಾ ದಳಗಳ ವೈಫಲ್ಯ ಕಾರಣ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ನಾಲ್ವರು ಪಾಕಿಸ್ತಾನಿ ಪ್ರಜೆಗಳು ಹಿಂದೂಗಳ ಹೆಸರಿಟ್ಟುಕೊಂಡು ನೆಲೆಸಿದ್ದ ವಿಚಾರಕ್ಕೆ ಸಂಬಂಧಿಸಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದ ಬಳಿ ಅನೇಕ ತನಿಖಾ ವಿಭಾಗಗಳಿವೆ. ಆದರೂ ಪಾಕಿಸ್ತಾನಿಯರು ನಮ್ಮಲ್ಲಿ ಬರುತ್ತಾರೆ, ನಮ್ಮಲ್ಲಿದ್ದುಕೊಂಡೇ ಪಾಸ್‌ಪೋರ್ಟ್ ಮಾಡಿಸಿ ಕೊಳ್ಳುತ್ತಾರೆಂದರೆ ಏನರ್ಥ? ಇದನ್ನು ನೋಡಿದರೆ ಕೇಂದ್ರೀಯ ತನಿಖಾ ದಳಗಳು ಎಲ್ಲೋ ವಿಫಲವಾಗಿವೆ ಎಂದು ಅನಿಸುತ್ತದೆ. ನಮಗೆ ಅವರ ಇರುವಿಕೆ ಗೊತ್ತಾದ ಮೇಲೆ ಕೆಲ ಪಾಕಿಸ್ತಾನಿಗರನ್ನು ಬಂಧಿಸಿದ್ದೇವೆ. ಕರ್ನಾಟಕ ಪೊಲೀಸರು ಸಮರ್ಥರಿದ್ದು, ಉಳಿದವರನ್ನೂ ಶೀಘ್ರ ಬಂಧಿಸಲಿದ್ದಾರೆ ಎಂದು ಹೇಳಿದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರಮೇಶ್ವರ ನೀವು ರಾಹುಲ್ ಗಾಂಧಿ ಅವರ ತರ ಮಾತನಾಡಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ.




