ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ದೇಶಕ್ಕೆ 85 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯಕ್ಕೂ ಮೂರು ಕೇಂದ್ರೀಯ ವಿದ್ಯಾಲಯ ಮಂಜೂರಾಗಿವೆ. ಚಿತ್ರದುರ್ಗ ಜಿಲ್ಲೆಯ ಕುಂಚಿಗನಾಳು ಗ್ರಾಮದ ಬಳಿಯ ಹೊಸ ಕೇಂದ್ರೀಯ ವಿದ್ಯಾಲಯ ಇದರಲ್ಲಿ ಸೇರಿದೆ. ಇದರೊಂದಿಗೆ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೂ ನೂತನ ಕೇಂದ್ರಿಯ ವಿದ್ಯಾಲಯಗಳು ಮಂಜೂರಾಗಿವೆ.
ಕೇಂದ್ರೀಯ ವಿದ್ಯಾಲಯದ ತರಗತಿಗಳು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡುವ ಸಾಧ್ಯತೆಯಿದ್ದು, ತಾತ್ಕಾಲಿಕವಾಗಿ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ಪ್ರಾರಂಭವಾಗಲಿವೆ. ಮುಂದಿನ ಮೂರು ವರ್ಷದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಿ ನಂತರ ಅಲ್ಲಿ ಹೊಸ ತರಗತಿಗಳನ್ನು ಪ್ರಾರಂಭಿಸುವುದು ಕೇಂದ್ರೀಯ ವಿದ್ಯಾಲಯದ ನಿಯಮವಾಗಿದೆ.
ಮಾಜಿ ಸಂಸದ ಎ.ನಾರಾಯಣಸ್ವಾಮಿ ಶ್ರಮ ಅಪಾರ:
ಅತಿ ಹಿಂದುಳಿದ ಪ್ರದೇಶ ಎನಿಸಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸ ಕೇಂದ್ರೀಯ ವಿದ್ಯಾಲಯ ಆರಂಭವಾಗುವುದರ ಹಿಂದೆ ಕೇಂದ್ರದ ಮಾಜಿ ಸಚಿವರು, ಮಾಜಿ ಸಂಸದರೂ ಆಗಿರುವ ಎ.ನಾರಾಯಣಸ್ವಾಮಿ ಅವರ ಶ್ರಮ ಅಪಾರವಾಗಿದೆ. ಈ ಹಿಂದೆ ಅವರು ಕೇಂದ್ರೀಯ ವಿದ್ಯಾಲಯ ಆರಂಭಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ತಾತ್ಕಾಲಿಕ ತರಗತಿ ಆರಂಭಿಸಲು ಪತ್ರ ವ್ಯವಹಾರ ನಡೆಸಿ ಕೊಠಡಿಗಳನ್ನು ಮಂಜೂರು ಮಾಡಿಸಿದ್ದರು. 2021ರಲ್ಲೇ ಬಹುತೇಕ ಎಲ್ಲಾ ಪ್ರಕ್ರಿಯೆಗಳು ಅಂತಿಮವಾಗಿ ಎರಡು ವರ್ಷದ ಹಿಂದೆಯೇ ಕೇಂದ್ರೀಯ ವಿದ್ಯಾಲಯ ಆರಂಭವಾಗಲಿದೆ ಎನ್ನಲಾಗುತ್ತಿತ್ತು.