ಸಕಲೇಶಪುರದಲ್ಲಿ ಎತ್ತಿನಹೊಳೆ ಯೋಜನೆಯ ಮೊದಲ ಹಂತ ಏತ ಕಾಮಗಾರಿಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದ್ದಾರೆ. ಈ ಮಧ್ಯೆ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು ವಾಸ್ತವಿಕ ವರದಿ ಸಲ್ಲಿಸಲು ರಾಜ್ಯಕ್ಕೆ ಸೂಚನೆ ನೀಡಿದೆ.
ಕೆಲವು ದಿನಗಳ ಹಿಂದೆಯೇ ಈ ಪತ್ರ ಬರೆಯಲಾಗಿದ್ದು, ಎತ್ತಿನಹೊಳೆ ಯೋಜನೆಯ ಪೂರ್ಣ ಅನುಷ್ಠಾನಕ್ಕೆ ಅರಣ್ಯ ಭೂಮಿ ಅಡ್ಡಿಯಾಗಿದೆ ಎಂದು ಹೇಳುತ್ತಲೇ ಇದೆ. ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ 10.1301 ಹೆಕ್ಟೇರು ಅರಣ್ಯ ಭೂಮಿ ಅರಣ್ಯೇತರವಾಗಿ ಪರಿವರ್ತಿಸಲು ಅನುಮತಿ ಕೋರಿ ಈ ವರ್ಷ ಜೂ.19ರಂದು ಕೇಂದ್ರ ಅರಣ್ಯ ಮಂತ್ರಾಲಯಕ್ಕೆ ತ್ವರಿತ ಪ್ರಸ್ತಾವನೆ ಕಳುಹಿಸಿದೆ ಇದಕ್ಕೆಆ.7ರಂದು ಸಚಿವಾಲಯ ಪತ್ರ ಬರೆದಿದೆ.
ಒಟ್ಟು 12 ಅಂಶಗಳಿಗೆ ಸ್ಪಷ್ಟಿಕರಣ ಮತ್ತು ಹೆಚ್ಚುವರಿ ಮಾಹಿತಿ ಒದಗಿಸುವಂತೆ ಪತ್ರ
ಅರಣ್ಯ ಭೂಮಿಗೆ ಏಕೀಕೃತ ಪ್ರಸ್ತಾವನೆ ಕಳುಹಿಸಿ: ವಿಸ್ತ್ರತ ಯೋಜನಾ ವರದಿಯಲ್ಲಿ ಎತ್ತಿನಹೊಳೆ ಯೋಜನೆಗೆ 1200 ಹೆಕ್ಟೇರ್ ಪ್ರದೇಶ ಬೇಕು, ಅದರಲ್ಲಿ ಶೇ.50 ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಉಲ್ಲೇಖಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ತ್ವರಿತ ಪ್ರಸ್ತಾವನೆ ಹೆಸರಿನಲ್ಲಿ ತುಂಡು ತುಂಡು ರೀತಿಯಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸುತ್ತಿದೆ. ಆದ್ದರಿಂದ ಹೆಚ್ಚಿನ ಭೂಮಿಯ ಅಗತ್ಯವಿದ್ದರೆ ರಾಜ್ಯ ಸರ್ಕಾರವು ತುಂಡು ರೀತಿಯಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸುವ ಬದಲು ಏಕೀಕೃತ ಪ್ರಸ್ತಾವನೆ ಸಲ್ಲಿಸಬೇಕು ಎಂದು ಕೇಂದ್ರ ಸೂಚಿಸಿದೆ.
ಹೆಚ್ಚುವರಿ ಭೂಮಿ ಬಳಕೆ? : ಯೋಜನೆಯ ಅನುಷ್ಠಾನಕ್ಕಾಗಿ 2016ರಲ್ಲಿ ಸಕಲೇಶಪುರ ತಾಲೂಕಿನಲ್ಲಿ 13.93 ಹೆಕ್ಟೇರ್ ಅರಣ್ಯ ಭೂಮಿ ಪರಿವರ್ತಿಸಲು ಆಗಿನ ಯೋಜನಾ ಅನುಷ್ಠಾನ ಸಂಸ್ಥೆ ಕರ್ನಾಟಕ ನೀರಾವರಿ ನಿಗಮ ಪ್ರಸ್ತಾವನೆ ಸಲ್ಲಿಸಿತ್ತು. ಬಳಿಕ 2019ರ ನ.13ರಂದು ರಾಜ್ಯ ಸರ್ಕಾರವು ಎರಡನೇ ಹಂತದ ಅರಣ್ಯ ಅನುಮತಿಯ ಮಾರ್ಪಾಡಿಗೆ ಕೇಂದ್ರಕ್ಕೆ ಪತ್ರ ಬರೆದಿತ್ತು. ಅರಣ್ಯ ಮಂತ್ರಾಲಯವು ಉಪಗ್ರಹ ಚಿತ್ರದ ಮೂಲಕ ಪ್ರಸ್ತಾವನೆ ವಿಶ್ಲೇಷಿಸಿದ ನಂತರ ರಾಜ್ಯ ಸರ್ಕಾರಕ್ಕೆ ನ.27ರಂದು ಪತ್ರ ಬರೆದು ಯೋಜನೆಗೆ ಅನುಮೋದಿತ ಪ್ರದೇಶಗಳ ಹೊರಗಿನ ಅರಣ್ಯ ಪ್ರದೇಶ ಬಳಸಿಕೊಂಡಿದೆ. ಆದ್ದರಿಂದ ಸಂಪೂರ್ಣ ಯೋಜನೆಗೆ ಅನುಮೋದಿಸಲಾದ ಅರಣ್ಯ ಪ್ರದೇಶವನ್ನು ಮರು ಸಮೀಕ್ಷೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಆದರೆ, ಈವರೆಗೆ ರಾಜ್ಯ ಸರ್ಕಾರ ಇದಕ್ಕೆ ಉತ್ತರಿಸಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯ ಸರ್ಕಾರ ತತ್‌ಕ್ಷಣದ ಪ್ರಸ್ತಾವನೆ (10.1301 ಹೆ.) ಕುರಿತು ಸ್ಪಷ್ಟಿಕರಣ ನೀಡಬೇಕು. ಈ ಅರಣ್ಯ ಭೂಮಿ ಹಿಂದಿನ ಎತ್ತಿನಹೊಳೆ ಯೋಜನೆಯೊಂದಿಗೆ ಜೋಡಣೆಯಾಗಿದ್ದರೆ, తుండు ಪ್ರಸ್ತಾವನೆ ಗಳನ್ನು ಸಲ್ಲಿಸಲು ಕಾರಣವೇನೆಂದು ಸಮರ್ಥನೆ ಯನ್ನೂ ಸಲ್ಲಿಸುವಂತೆ ಕೇಂದ್ರ ನಿರ್ದೇಶಿಸಿದೆ