ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅವ್ಯವಹಾರದ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 10 ಕೋಟಿಗಿಂತ ಹೆಚ್ಚು ಮೊತ್ತದ ಹಗರಣ ನಡೆದರೆ ಸ್ವಯಂಪ್ರೇರಿತವಾಗಿ ಸಿಬಿಐ ತನಿಖೆ ಕೈಗೆತ್ತಿಕೊಳ್ಳಲು ಅವಕಾಶವಿದೆ. ಇದು 10 ಲಕ್ಷ ರೂಪಾಯಿ ಹಗರಣವಲ್ಲ; 187 ಕೋಟಿ ರೂಪಾಯಿಯ ಹಗರಣ. ನಿಮಗೆ ಸಿಐಡಿ ಮೇಲೆ ನಂಬಿಕೆ ಇರಬಹುದು. ಬೇರೆ ರಾಜ್ಯಗಳಿಗೂ ಹಣದ ವರ್ಗಾವಣೆ, ಕಂಪನಿಗಳ ಖಾತೆಗೆ ವರ್ಗಾವಣೆ ಆಗಿದೆ ಎಂಬ ಪ್ರಾಥಮಿಕ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಕೊಡುವುದು ಸೂಕ್ತ ಎಂದು ನುಡಿದರು.

ಸಾಕ್ಷ್ಯಾಧಾರ ನಾಶಪಡಿಸಲು ಸರಕಾರ ಪ್ರಯತ್ನಿಸುತ್ತಿದೆಯೇ ಎಂಬ ಅನುಮಾನ ಮೂಡಿದೆ. ಇನ್ನೂ ನೀವು ಸಚಿವರ ರಾಜೀನಾಮೆ ಪಡೆಯದಿದ್ದರೆ, ಡೆತ್ ನೋಟಿನಲ್ಲಿ ಸಚಿವರ ಮೌಖಿಕ ಸೂಚನೆ ಎಂಬುದನ್ನು ಗಮನಿಸಿಯೂ ನೀವು ರಾಜೀನಾಮೆ ಪಡೆಯದೆ ಇರುವುದನ್ನು ನೋಡಿದಾಗ ಬಹಳ ದೊಡ್ಡ ವ್ಯಕ್ತಿಗಳು ಇದರ ಹಿಂದೆ ಇರಬಹುದು ಎಂಬ ಅನುಮಾನ ನಮಗೆ ಮೂಡಲು ಕಾರಣವಾಗಿದೆ ಎಂದು ವಿಶ್ಲೇಷಿಸಿದರು.

ಯೂನಿಯನ್ ಬ್ಯಾಂಕಿನ ಅಧಿಕಾರಿಗಳು ಈಗಾಗಲೇ ಸಿಬಿಐ ತನಿಖೆ ನಡೆಸಲು ಪತ್ರ ಬರೆದಿದ್ದಾರೆ. ನಾವು ಕೂಡ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹಿಸುತ್ತೇವೆ ಎಂದು ಅವರು ತಿಳಿಸಿದರು. ಮುಖ್ಯಮಂತ್ರಿಯವರು ತಕ್ಷಣ ಸಚಿವ ನಾಗೇಂದ್ರರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

By admin

Leave a Reply

Your email address will not be published. Required fields are marked *

Verified by MonsterInsights
Did you find this content engaging?