Wednesday, April 30, 2025
24 C
Bengaluru
LIVE
ಮನೆ#Exclusive NewsTop Newsಬೈಕ್‌ಗೆ ಕಾರು ಡಿಕ್ಕಿ: ದಿಲ್ಲಿಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಸಾವು

ಬೈಕ್‌ಗೆ ಕಾರು ಡಿಕ್ಕಿ: ದಿಲ್ಲಿಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಸಾವು

ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಮತ್ತೊಂದು ಆಘಾತಕಾರಿ ಹಿಟ್ ಆಂಡ್ ಡ್ರ್ಯಾಗ್ ಪ್ರಕರಣ ವರದಿಯಾಗಿದೆ. ದಿಲ್ಲಿಯ ನಾಂಗ್ಲೋಯಿ ಪ್ರದೇಶದಲ್ಲಿ ಕಳೆದ ರಾತ್ರಿ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರ ಬೈಕ್‌ಗೆ ಡಿಕ್ಕಿ ಹೊಡೆದ ಕಾರು, ಅವರನ್ನು ಕೆಲವು ಮೀಟರ್‌ಗಳಷ್ಟು ದೂರ ಎಳೆದುಕೊಂಡ ಹೋದ ಪರಿಣಾಮ, ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ.

ಭಾನುವಾರ ತಡರಾತ್ರಿ ಈ ಭಯಾನಕ ಘಟನೆ ನಡೆದಿದೆ. ಪೊಲೀಸ್ ಕಾನ್‌ಸ್ಟೇಬಲ್ ಸಂದೀಪ್ (30) ಅವರು ಕರ್ತವ್ಯದ ವೇಳೆ ಮಫ್ತಿಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು ಮಫ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಆಗ ಅವರ ಬೈಕ್ ಅನ್ನು ವ್ಯಾಗನ್ ಕಾರೊಂದು ಓವರ್ ಟೇಕ್ ಮಾಡಲು ಪ್ರಯತ್ನಿಸಿತ್ತು. ಅಜಾಗರೂಕತೆಯಿಂದ ಕಾರು ಚಲಾಯಿಸುತ್ತಿರುವುದನ್ನು ಕಂಡ ಸಂದೀಪ್, ನಿಧಾನವಾಗಿ ಹೋಗುವಂತೆ ಚಾಲಕನಿಗೆ ಸೂಚಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಕಾರಿನ ವೇಗ ಹೆಚ್ಚಿಸಿದ ಚಾಲಕ, ಹಿಂಬದಿಯಿಂದ ಸಂದೀಪ್ ಅವರ ಬೈಕ್‌ಗೆ ಡಿಕ್ಕಿ ಹೊಡೆಸಿದ್ದಾನೆ. ಕೆಳಗೆ ಬಿದ್ದ ಬೈಕ್ ಹಾಗೂ ಸಂದೀಪ್ ಅವರನ್ನು ಸುಮಾರು ಹತ್ತು ಮೀಟರ್‌ಗಳಷ್ಟು ದೂರದವರೆಗೆ ಎಳೆದುಕೊಂಡು ಕಾರು ಸಾಗಿದೆ.

ತಲೆಗೆ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ಸಂದೀಪ್ ಅವರನ್ನು ಸಮೀಪದ ಸೋನಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಅವರನ್ನು ಪಶ್ಚಿಮ ವಿಹಾರದ ಬಾಲಾಜಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

ಈ ಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾವು ಘಟನೆಯನ್ನು ಸೆರೆಹಿಡಿದಿದೆ. ಕಾರು ಚಾಲಕನಿಗೆ ವೇಗ ತಗ್ಗಿಸುವಂತೆ ಸಂದೀಪ್ ಸೂಚಿಸುವುದು, ಆದರೆ ಕಾರು ಚಾಲಕ ವೇಗವನ್ನು ಇನ್ನಷ್ಟು ಹೆಚ್ಚಿಸಿ ಬೈಕ್‌ಗೆ ಡಿಕ್ಕಿ ಹೊಡೆದಿರುವುದು ವಿಡಿಯೋದಲ್ಲಿ ಕಾಣಿಸಿದೆ.  ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದರು. ಅಪಘಾತದ ಬಳಿಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಇಬ್ಬರೂ ಪರಾರಿಯಾಗಿದ್ದಾರೆ. ಕಾರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಲಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments