ಒಟ್ಟಾವಾ: ಖಲಿಸ್ತಾನ ಉಗ್ರ ಸಂಘಟನೆಯ ವಿಚಾರವಾಗಿ ಭಾರತದೊಂದಿಗೆ ಚೇಷ್ಟೆ ಮಾಡುತ್ತಿರುವ ಕೆನಡಾ ರಾಷ್ಟ್ರದ ಪ್ರಧಾನಿ ಜಸ್ಟಿನ್‌ ಟ್ರುಡೋ ರಾಜೀನಾಮೆ ನೀಡುವ ಸಾಧ್ಯತೆ ಬಹುತೇಕ ಹೆಚ್ಚಾಗಿದೆ ಎಂದು ವರದಿಯಾಗಿದೆ.

ಟ್ರುಡೋ ಪ್ರತಿನಿಧಿಸುತ್ತಿರುವ ಲಿಬರಲ್ ಪಕ್ಷದ ಸಂಸದರೇ ಈಗ ಪ್ರಧಾನಿ ವಿರುದ್ಧ ತಿರುಗಿ ಬಿದ್ದಿದ್ದು ರಾಜೀನಾಮೆ ನೀಡಬೇಕು ಎಂದು ಉನ್ನತ ಮೂಲಗಳಲ್ಲಿ ವರದಿಯಾಗಿದೆ. ಉಪಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್ ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಟ್ರುಡೋ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ.

ಉಪಪ್ರಧಾನಿ ಹುದ್ದೆಯೊಂದಿಗೆ ಹಣಕಾಸು ಖಾತೆಯನ್ನು ಹೊಂದಿದ್ದ ಫ್ರೀಲ್ಯಾಂಡ್ ಟ್ರುಡೋ ಸರ್ಕಾರದಲ್ಲಿ ಅತ್ಯಂತ ಶಕ್ತಿಶಾಲಿ ಸಚಿವರಾಗಿದ್ದರು. ಕಳೆದ 4 ವರ್ಷಗಳಲ್ಲಿ ಸರ್ಕಾರದಿಂದ ಹೊರಬಂದ ಎರಡನೇ ಹಣಕಾಸು ಸಚಿವೆ ಇವರಾಗಿದ್ದಾರೆ. ಟ್ರುಡೋ ರಾಜೀನಾಮೆ ನೀಡಲು ಚಿಂತನೆ ಮಾಡಿದ್ದಾರೆ ಮತ್ತು ಸಂಸತ್ತನ್ನು ಉದ್ದೇಶಿಸಿ ಮಾತನಾಡಲು ಮುಂದಾಗಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಕೆನಡಾ ಮಾಧ್ಯಮವೊಂದು ವರದಿ ಮಾಡಿದೆ.

ಕೆನಡಾದ ಪ್ರಮುಖ ವ್ಯಾಪಾರ ಪಾಲುದಾರ ಅಮೆರಿಕವಾಗಿದ್ದು ಪ್ರತಿ ವರ್ಷ ಅದರ ರಫ್ತಿನ 75 ಪ್ರತಿಶತವು ಅಮೆರಿಕಕ್ಕೆ ಹೋಗುತ್ತಿದೆ. ಕೆಲ ದಿನಗಳ ಹಿಂದೆ ಜಸ್ಟಿನ್‌ ಟ್ರುಡೋ ಟ್ರಂಪ್‌ ಅವರನ್ನು ಫ್ಲೋರಿಡಾದಲ್ಲಿ ಭೇಟಿಯಾಗಿ ಮಾತನಾಡಿದ್ದರು. ಆಮದು ಸುಂಕದ ಬಗ್ಗೆ ಟ್ರುಡೋ ಮಾತುಕತೆ ನಡೆಸಿದ್ದರೂ ಟ್ರಂಪ್‌ ಕಡೆಯಿಂದ ಯಾವುದೇ ಧನಾತ್ಮಕ ನಿರ್ಧಾರ ಪ್ರಕಟವಾಗಿಲ್ಲ.

ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಕಳಪೆ ಸಾಧನೆಗೆ ಟ್ರುಡೋ ಅವರ ನಾಯಕತ್ವವೇ ಕಾರಣ ಎಂದು ಸದಸ್ಯರು ಬಹಿರಂಗವಾಗಿಯೇ ಹೇಳಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಕೆನಾಡದ ಮಾಧ್ಯಮಗಳು ವರದಿ ಮಾಡಿವೆ.

ಖಲಿಸ್ತಾನ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಆದರೆ ಅ.16 ರಂದು ನಾವು ಯಾವುದೇ ಪುರಾವೆಯನ್ನು ಭಾರತಕ್ಕೆ ನೀಡಿಲ್ಲ ಎಂದು ಕೆ ಜಸ್ಟಿನ್‌ ಟ್ರುಡೋ ಅಧಿಕೃತವಾಗಿ ಒಪ್ಪಿಕೊಳ್ಳುವ ಮೂಲಕ ಸೆಲ್ಫ್‌ ಗೋಲ್‌ ಹೊಡೆದಿದ್ದರು. ಇದರಿಂದಾಗಿ ಕೆನಡಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸುವಂತಾಗಿತ್ತು. ಖಲಿಸ್ತಾನಿ ಪರ ಟ್ರುಡೋ ಬ್ಯಾಟಿಂಗ್‌ ಮಾಡುತ್ತಿರುವುದಕ್ಕೆ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾಗಿತ್ತು.

By Veeresh

Leave a Reply

Your email address will not be published. Required fields are marked *

Verified by MonsterInsights