ಇತ್ತೀಚೆಗೆ ಕೃತಕ ನಗು ಪಡೆಯಲು ಹಲ್ಲುಗಳನ್ನ ಸ್ಮೈಲ್ ಡಿಸೈನಿಂಗ್ ಮಾಡಿಸೋರ ಸಂಖ್ಯೆ ಹೆಚ್ಚಾಗಿದೆ. ಇದಕ್ಕಾಗಿ ಯುವಕ ಯುವತಿಯರು ಡೆಂಟಲ್ ಕ್ಲಿನಿಕ್ ಮೊರೆ ಹೋಗುತ್ತಿದ್ದಾರೆ. ಈ ರೀತಿ ಹೋಗುವ ಮುನ್ನ ಈ ಸ್ಟೋರಿಯನ್ನ ಪೂರ್ತಿಯಾಗಿ ಓದಿ. ನಗುವನ್ನು ಹೆಚ್ಚಿಸಲು ಶಸ್ತ್ರಚಿಕಿತ್ಸೆಯ ಮೊರೆ ಹೋಗಿದ್ದ ವ್ಯಕ್ತಿ ಸಾವಿಗೀಡಾಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಫೆಬ್ರವರಿ 16ರಂದು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಎಫ್‌ಎಂಎಸ್ ಇಂಟರ್‌ನ್ಯಾಶನಲ್ ಡೆಂಟಲ್ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ಲಕ್ಷ್ಮೀ ನಾರಾಯಣ ವಿಂಜಮ್‌ ಎಂಬ ವ್ಯಕ್ತಿ ‘ಸ್ಮೈಲ್ ಡಿಸೈನಿಂಗ್’ ಪ್ರಕ್ರಿಯೆಗೆ ಒಳಗಾಗುವಾಗ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮೀ ನಾರಾಯಣ ವಿಂಜಮ್‌ ಅನಸ್ತೇಶಿಯಾ ಒವರ್‌ಡೋಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಅವರ ತಂದೆ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಮುಲು ವಿಂಜಮ್‌, ಶಸ್ತ್ರ ಚಿಕಿತ್ಸೆ ವೇಳೆ ಲಕ್ಷ್ಮೀ ನಾರಾಯಣ ಪ್ರಜ್ಞೆ ತಪ್ಪಿದ ನಂತರ ಸಿಬ್ಬಂದಿ ಕರೆ ಮಾಡಿ ಕ್ಲಿನಿಕ್‌ಗೆ ಬರುವಂತೆ ಹೇಳಿದರು. ತಕ್ಷಣವೇ ಹೋಗಿ ಮಗನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ, ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದರು. ಶಸ್ತ್ರ ಚಿಕಿತ್ಸೆ ಬಗ್ಗೆ ಮಗ ನಮಗೆ ತಿಳಿಸಿರಲಿಲ್ಲ. ಆತನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಅವನ ಸಾವಿಗೆ ವೈದ್ಯರೇ ಕಾರಣ ಎಂದು ರಾಹುಲ್‌ ವಿಂಜಮ್‌ ಆರೋಪಿಸಿದ್ದಾರೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಜುಬಿಲಿ ಹಿಲ್ಸ್‌ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಕೆ ವೆಂಕಟೇಶ್‌ ರೆಡ್ಡಿ, ಫೆಬ್ರವರಿ 16ರಂದು ಮಧ್ಯಾಹ್ನ 2.30ರ ಸುಮಾರಿಗೆ ಲಕ್ಷ್ಮೀ ನಾರಾಯಣ್‌ ಕ್ಲಿನಿಕ್‌ಗೆ ಹೋಗಿದ್ದರು. ಸಂಜೆ 4.30ರ ಸುಮಾರಿಗೆ ಆತನನ್ನು ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲಾಯಿತು. ಆಪರೇಷನ್‌ ಥಿಯೇಟರ್‌ನಲ್ಲಿ ಎರಡು ಗಂಟೆಗಳ ಕಾಲ ಆಪರೇಷನ್‌ ಪ್ರಕ್ರಿಯೆ ನಡೆದಿದೆ. ಸಂಜೆ 7 ರ ಸುಮಾರಿಗೆ ಕ್ಲಿನಿಕ್‌ನವರು ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಆತನನ್ನು ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಲಕ್ಷ್ಮೀ ನಾರಾಯಣ್‌ ಸಾವನ್ನಪ್ಪಿದ್ದ ಎಂದು ಹೇಳಿದ್ದಾರೆ.

ಲಕ್ಷ್ಮೀ ನಾರಾಯಣ್‌ ವಂಜಮ್‌ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಕೆ ವೆಂಕಟೇಶ್‌ ರೆಡ್ಡಿ ಹೇಳಿದ್ದಾರೆ. ವಾರದ ಹಿಂದೆಯಷ್ಟೇ ಲಕ್ಷ್ಮೀ ನಾರಾಯಣ್‌ಗೆ ನಿಶ್ಚಿತಾರ್ಥ ಆಗಿ, ಮುಂದಿನ ತಿಂಗಳು ಮದುವೆ ನಿಗದಿಯಾಗಿತ್ತು. ಆದರೆ, ಮದುವೆಗೂ ಮುನ್ನ ನಗುವನ್ನು ಹೆಚ್ಚಿಸಿಕೊಳ್ಳಲು ಹೋದ ಯುವಕ ಈಗ ಸಾವಿಗೀಡಾಗಿದ್ದಾನೆ.

By admin

Leave a Reply

Your email address will not be published. Required fields are marked *

Verified by MonsterInsights