ಮಂಡ್ಯ: ಮೈಶುಗರ್ ಜಿಲ್ಲೆಯ ಜೀವನಾಡಿ. ರೈತರ ಬದುಕು ಕಟ್ಟಿಕೊಡಿತ್ತಿರುವ ಸಕ್ಕರೆ ಕಂಪನಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಕಂಪನಿಗೆ ನಷ್ಟ ಉಂಟುಮಾಡಿದ ಮಾಜಿ ಸಿಎಂ ಯಡಿಯೂರಪ್ಪ ಬೆಂಬಲಿನ ವಿರುದ್ಧ ಸಿವಿಲ್ ದಾವೆ ಹೂಡಿ, ಆಸ್ತಿ ಮುಟ್ಟುಗೋಲಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಯಡಿಯೂರಪ್ಪ ಅವಧಿಯಲ್ಲಿ ಕಂಪನಿ ಅಧ್ಯಕ್ಷರಾಗಿದ್ದ ನಾಗರಾಜಪ್ಪ ಗೆ ಸಂಬಂಧಿಸಿದ ಚರ ಮತ್ತು ಚಿರಾಸ್ತಿ ಮಾಹಿತಿ ಕಲೆಹಾಕಲು ಮುಂದಾಗಿದೆ.

ಮೈಷುಗರ್ ಕಂಪನಿ ವ್ಯವಸ್ಥಾಪಕ ನಿರ್ದೇಶಕರು ನಷ್ಟ ವಸೂಲಿ ಮಾಡಲು ನಾಗರಾಜಪ್ಪ ಮತ್ತು ಅವರ ಸಂಬಂಧಿಕರಿಗೆ ಸಂಬಂಧಿಸಿದ ಆಸ್ತಿ ವಿವರ ನೀಡುವಂತೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಪ್ರಕರಣ ಸಂಬಂಧ ಆರೋಪ ಸಾಬೀತಾಗಿದ್ದು, ಆದ್ದರಿಂದ ಆಸ್ತಿ ಮುಟ್ಟುಗೋಲಿಗೆ ಮೈಷುಗರ್ ಎಂಡಿ ಮುಂದಾಗಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಾಗರಾಜಪ್ಪ 2008-09ರಿಂದ 2011-12ರ ವರೆಗೆ ಮೈಶುಗರ್ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಕಂಪನಿಗೆ ಸುಮಾರು 121ಕೋಟಿ ನಷ್ಟ ಉಂಟು ಮಾಡಿರುವ ಬಗ್ಗೆ ಆರೋಪ ಸಾಬೀತಾಗಿದೆ. ನಷ್ಟದ ಹಿನ್ನಲೆಯಲ್ಲಿ ನಷ್ಟದ ಮೊತ್ತವನ್ನು ವಸೂಲಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ನಷ್ಟದ ಮೊತ್ತ ವಸೂಲಿ ಪ್ರಕರಣ ಸದ್ಯ ರಾಜಕೀಯಕ್ಕೆ ತಿರುಗಿಕೊಂಡಿಲ್ಲ. ನಾಗರಾಜಪ್ಪ ರಾಜಕೀಯದಿಂದ ದೂರ ಉಳಿದುಕೊಂಡು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು. ಸದ್ಯ ಬಿಜೆಪಿ ಯಾವ ರೀತಿ ಪ್ರಕರಣವನ್ನು ತೆಗೆದುಕೊಳ್ಳುತ್ತೆ ಎಂಬುದರ ಬಗ್ಗೆ ಜಿಲ್ಲೆಯಲ್ಲಿ ಚರ್ಚೆ ಶುರುವಾಗಿದೆ.


