ಕ್ರೈಂ ಸ್ಟೋರಿಸುದ್ದಿ

ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರ ಕೊಲೆ;೩ ದಿನದ ಬಳಿಕ ಶವ ಪತ್ತೆ

ಬೆಳಗಾವಿ: ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ಭೀಕರ ಕೊಲೆಯೊಂದು ನಡೆದಿದ್ದು, 50 ವರ್ಷದ ಕಲ್ಮೇಶ್ ಕೋಟಿ ಎಂಬಾತನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗ್ರಾಮದ ಸಮೀಪವಿರುವ ಮೆಕ್ಕೆಜೋಳದ ಗದ್ದೆಯಲ್ಲಿ ಕಲ್ಮೇಶ್ ಶವ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ಮಾಡಿದ ನಂತರ ಮರ್ಮಾಂಗವನ್ನು ಕತ್ತರಿಸಿ ವಿಕೃತಿ ಮೆರೆದಿರುವುದು ಕಂಡುಬಂದಿದೆ. ಈ ಘಟನೆಯು ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಎಸ್‌ಪಿ ರಾಮರಾಜನ್ ಮತ್ತು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಮೃತ ಕಲ್ಮೇಶ್ ಮೂಲತಃ ಹಿರೇನಂದಿಹಳ್ಳಿ ಗ್ರಾಮದವರಾಗಿದ್ದು, ಕಳೆದ ಕೆಲವು ಸಮಯದಿಂದ ತುಮಕೂರಿನಲ್ಲಿ ಹೋಮ್ ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು ಹತ್ತು ದಿನಗಳ ಹಿಂದಷ್ಟೇ ಅವರು ತಮ್ಮ ಗ್ರಾಮಕ್ಕೆ ಮರಳಿದ್ದರು . ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಕೊಲೆಯು ನಾಲ್ಕು ದಿನಗಳ ಹಿಂದೆಯೇ ನಡೆದಿರಬಹುದು ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹತ್ತು ವರ್ಷಗಳ ಹಿಂದೆ ಪತ್ನಿಯಿಂದ ದೂರವಾಗಿದ್ದ ಕಲ್ಮೇಶ್ ತಮ್ಮ ವೃದ್ಧ ತಾಯಿಯೊಂದಿಗೆ ವಾಸಿಸುತ್ತಿದ್ದರು.

ಈ ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ಗಂಭೀರ ತನಿಖೆ ನಡೆಸುತ್ತಿದ್ದು, ಹಣಕಾಸಿನ ವ್ಯವಹಾರ, ಆಸ್ತಿ ವಿವಾದ ಅಥವಾ ಯಾವುದಾದರೂ ಮಹಿಳಾ ಸಂಬಂಧಿತ ಪ್ರೇಮ ಪ್ರಕರಣಗಳು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಮೃತನ ಪತ್ನಿ ಮತ್ತು ಪುತ್ರ ಹಿರೇನಂದಿಹಳ್ಳಿಗೆ ಆಗಮಿಸಿದ್ದಾರೆ. ಸದ್ಯಕ್ಕೆ ಪೊಲೀಸರು ವಿವಿಧ ಆಯಾಮಗಳಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

Comments (0)

Your email address will not be published. Required fields are marked *

Back to top button