Top Newsಆರೋಗ್ಯವೈರಲ್ ನ್ಯೂಸ್ಸುದ್ದಿ

ಗರ್ಭಕಂಠ ಕ್ಯಾನ್ಸರ್‌ಗೆ ಬ್ರೇಕ್; ದೇಶಾದ್ಯಂತ 8 ಕೋಟಿ ಬಾಲಕಿಯರಿಗೆ HPV ಲಸಿಕೆ!

ಭಾರತದಲ್ಲಿ ಮಹಿಳೆಯರ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಮಾರಣಾಂತಿಕ ಗರ್ಭಕಂಠದ ಕ್ಯಾನ್ಸರ್ ಮುಕ್ತ ಭಾರತವನ್ನಾಗಿಸಲು ಬೃಹತ್ ಹೆಚ್‌ಪಿವಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಪ್ರತಿ ವರ್ಷ ಸುಮಾರು 75,000 ಮಹಿಳೆಯರು ಈ ಕ್ಯಾನ್ಸರ್‌ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದು, ಈ ಸಾವಿನ ಪ್ರಮಾಣವನ್ನು ತಡೆಗಟ್ಟಲು ಈ ಲಸಿಕೆ ಒಂದು ಪ್ರಬಲ ರಕ್ಷಾ ಕವಚವಾಗಿ ಕೆಲಸ ಮಾಡಲಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನಂತೆ, ಈ ಅಭಿಯಾನದಲ್ಲಿ 9 ರಿಂದ 14 ವರ್ಷದೊಳಗಿನ ಬಾಲಕಿಯರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಈ ಹಿಂದೆ ಎರಡು ಡೋಸ್‌ಗಳನ್ನು ನೀಡಲು ಉದ್ದೇಶಿಸಲಾಗಿತ್ತಾದರೂ, ಈಗ ಕೇವಲ ಒಂದು ಡೋಸ್ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಈ ಒಂದು ಡೋಸ್ ಲಸಿಕೆಯು ಹೆಚ್‌ಪಿವಿ ಸೋಂಕಿನಿಂದ ಬರುವ ಶೇ. 85ರಷ್ಟು ಕ್ಯಾನ್ಸರ್ ಅನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಮೊದಲ ಹಂತದಲ್ಲಿ ದೇಶಾದ್ಯಂತ ಸುಮಾರು 8 ಕೋಟಿ ಹೆಣ್ಣು ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಶಾಲೆಗಳು ಮತ್ತು ಸರ್ಕಾರಿ ಲಸಿಕಾ ಕೇಂದ್ರಗಳ ಮೂಲಕ ಈ ಅಭಿಯಾನ ಮನೆಮನೆಗೆ ತಲುಪಲಿದೆ.

ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ, ಮುಂದಿನ ಮೂರು ವರ್ಷಗಳ ಕಾಲ ಹಂತ ಹಂತವಾಗಿ ಈ ಬೃಹತ್ ಕಾರ್ಯಕ್ರಮ ಜಾರಿಯಾಗಲಿದೆ. ಮಹಿಳೆಯರ ಜೀವ ಉಳಿಸುವ ಈ ಲಸಿಕೆಯು ಭವಿಷ್ಯದ ಪೀಳಿಗೆಯನ್ನು ಕ್ಯಾನ್ಸರ್ ಮುಕ್ತವಾಗಿಸುವ ಮಹತ್ವದ ಹೆಜ್ಜೆಯಾಗಿದೆ. ಲಸಿಕೆ ಪಡೆಯುವ ಮೂಲಕ ಪ್ರತಿಯೊಬ್ಬ ಹೆಣ್ಣು ಮಗು ಈ ಗಂಭೀರ ಕಾಯಿಲೆಯಿಂದ ಸುರಕ್ಷಿತವಾಗಿರಲಿ ಎಂಬುದು ಸರ್ಕಾರದ ಆಶಯವಾಗಿದೆ.

Comments (0)

Your email address will not be published. Required fields are marked *

Back to top button