ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಜಾಮೀನು ಅರ್ಜಿ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ, ಆದರೆ ಬೇಲ್ ಸಿಕ್ಕರೆ ಬಳ್ಳಾರಿ ಟು ಬೆಂಗಳೂರು ಮೆರವಣಿಗೆಗೆ ನೀಲನಕ್ಷೆ ಈಗಲೇ ತಯಾರಿಸಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ದರ್ಶನ್ ಪರ ವಕೀಲರು ಕೂಡ ದರ್ಶನ್ ಬೇಲ್ ನೀಡಲು ವಾದವನ್ನೂ ಮಂಡಿಸಲಾಗಿದ್ದು, ಪಬ್ಲಿಕ್ ಪ್ರಾಸಿಕ್ಯೂಷನ್ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಜಾಮೀನು ಅರ್ಜಿ ವಿಚಾರಣೆ 27ಕ್ಕೆ ಮುಂದೂಡಿಕೆಯಾಗಿದೆ. ಯಾವುದೇ ಕಾರಣಕ್ಕೂ 27ರಂದು ಜಾಮೀನು ಮಿಸ್ ಆಗುವುದೇ ಇಲ್ಲ; ಸಿಗುವುದು ಪಕ್ಕಾ ಎನ್ನುವ ವಕೀಲರ ಭರವಸೆ ಹಿನ್ನೆಲೆಯಲ್ಲಿ ದರ್ಶನ್ ರನ್ನು ಬಳ್ಳಾರಿ ಸೆಂಟ್ರಲ್ ಜೈಲು ಟು ಬೆಂಗಳೂರಿಗೆ ಕರೆದೊಯ್ಯಲು ಯಾವ ಮಾರ್ಗ ಆಯ್ಕೆ ಮಾಡಿಕೊಳ್ಳುವ ಎನ್ನುವ ಕೂಲಂಕಷ ಚರ್ಚೆ ಬಳಿಕ ಹೆಲಿಕಾಪ್ಟರ್ ಆಯ್ಕೆ ಮಾರ್ಗ ಹುಡುಕಿಕೊಳ್ಳಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ದರ್ಶನ್ ಸ್ಥಳಾಂತರದ ಬಳಿಕ ಇಲ್ಲಿ ವಾತಾವರಣಕ್ಕೆ ಹೊಂದಿಕೊಳ್ಳಲು ತೀವ್ರ ಪರದಾಡಿದರು. ಜೈಲಿನಲ್ಲಿ ತನಗೆ ಯಾವುದೇ ಮೂಲ ಸೌಕರ್ಯ ಸಿಗುತ್ತಿಲ್ಲ ಎಂದು ಜೈಲು ಅಧಿಕಾರಿಗಳ ಮೇಲೆ ರೇಗಾಡಿದ್ದರು. ಈಗ ಜಾಮೀನು ಸಿಗುವ ವಿಶ್ವಾಸವನ್ನು ಕುಟುಂಬಸ್ಥರು ಮತ್ತು ವಕೀಲರು ವ್ಯಕ್ತಪಡಿಸಿದ್ದರಿಂದ ಖುಷಿಯಲ್ಲಿರುವ ದರ್ಶನ್‌ಗೆ ಆಪ್ತರು ಮತ್ತು ಕುಟುಂಬ ಸ್ಥರು ಪ್ರಯಾಣದ ಗಿಫ್ಟ್ ಆಗಿ ಹೆಲಿಕಾಪ್ಟರ್ ನೋಂದಣಿ ಮಾಡಿಸಿದ್ದಾರೆ. ಬಳ್ಳಾರಿ-ಬೆಂಗಳೂರಿಗೆ ಹೊರಡಲು 5 ಲಕ್ಷ ರೂ, ಖಾಸಗಿ ಕಂಪನಿ ಬೇಡಿಕೆ ಇಟ್ಟಿದ್ದು, ಇದಕ್ಕೆ ಸಮ್ಮತಿಸಿರುವ ದರ್ಶನ್ ಆಪ್ತರು ಮುಂಗಡವಾಗಿ ಟೋಕನ್ ಹಣವನ್ನೂ ಪಾವತಿ ಮಾಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಇದು ಮಾತ್ರವಲ್ಲದೇ ಹೆಲಿಕಾಪ್ಟರ್ ಬಳಕೆಗೆ ಬೇಕಿರುವ ಅನುಮತಿ, ಪರವಾನಗಿ ಪ್ರಕ್ರಿಯೆಗಳನ್ನು ದರ್ಶನ್ ಆಪ್ತರು ನಡೆಸಿದ್ದಾರೆ.