ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಐಸಿಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಇರುವ ಮುಸ್ಲೀಂ ಮೌಲ್ವಿ ಕುಳಿತಿರುವ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎನ್ ಐ ಎಗೆ ಒಪ್ಪಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯ ಜೊತೆ ವೇದಿಕೆ ಹಂಚಿಕೊಂಡ ಮೌಲ್ವಿಯ ವಿರುದ್ದ ವಿಜಯಪುರದಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿರುವ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಅವರಿಗೆ ಐಎಸ್ ಐ ಸಂಪರ್ಕ ಇರುವ ಬಗ್ಗೆ ನಮ್ಮ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ. ಮುಖ್ಯಮಂತ್ರಿಗಳು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಎನ್ ಐಎ ಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಕುಕ್ಕರ್ ಬಾಂಬ್ ಪ್ರಕರಣದ ಬಗ್ಗೆ ಕಾಂಗ್ರೆಸ್ ನವರು ಲಘುವಾಗಿ ಪರಿಗಣಿಸಿದ್ದರು. ಆದರೆ, ಅವರಲ್ಲಿ ಐದಾರು ಜನರು ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಮುಖ್ಯಮಂತ್ರಿಗಳು ಮುಸ್ಲೀಂ ಸಮುದಾಯಕ್ಕೆ 10 ಸಾವಿರ ಕೋಟಿ ರೂ. ನೀಡುವುದಾಗಿ ಹೇಳಿರುವುದು ಓಲೈಕೆ ರಾಜಕಾರಣದ ಮುಂದುವರೆದ ಭಾಗ ಅಲ್ಲದೇ ಪ್ರಚೋದನಾಕಾರಿಯಾಗಿಯೂ ಇದೆ. ಇಡೀ ಕಾಂಗ್ರೆಸ್ಸಿನ ನೀತಿ ನೋಡಿದಾಗ ಅವರ ಸಚಿವ ಸಂಪುಟದ ಸಹೊದ್ಯೋಗಿ ಸ್ಪೀಕರ್ನ್ ಅಲ್ಪ ಸಂಖ್ಯಾತರನ್ನು ಮಾಡಿದ್ದೇವೆ ಎಲ್ಲರೂ ಅವರ ಮುಂದೆ ಜಿ ಹುಜುರ್ ಅನಬೇಕು ಎನ್ನುತ್ತಾರೆ ಇದೊಂದು ಪ್ರಚೋದನೆ. ಸಿಎಂ ಆದವರು ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಬೇಕು. ದೇಶದ ಸಂಪತ್ತನ್ನು ಬೆಳೆಸಲು ಎಲ್ಲರೂ ದುಡಿಯಬೇಕು. ಅದು ದೇಶಕ್ಕೆ ಇರುತ್ತದೆ. ಅದನ್ನು ಹೇಳುವ ಬದಲು ಒಂದು ಸಮುದಾಯಕ್ಕೆ ಸಂಪತ್ತು ಹಂಚಿಕೆ ಮಾಡುವ ಬಗ್ಗೆ ಹೇಳುತ್ತಾರೆ. ಇದು ಸಮಾಜ ಒಡೆಯುವ ಕೆಲಸ ಎಂದು ಹೇಳಿದರು.