ಚೆನ್ನೈ: ತಮಿಳುನಾಡಿನಲ್ಲಿ ಸೆಲೆಬ್ರಿಟಿಗಳು ಮತ್ತು ರಾಜಕೀಯ ಗಣ್ಯ ವ್ಯಕ್ತಿಗಳ ಮನೆಗಳಿಗೆ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಬಂದಿದೆ..
ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರ ಕಚೇರಿ ಹಾಗೂ ನಟರಾದ ಅಜಿತ್ ಕುಮಾರ್, ಅರವಿಂದ್ ಸ್ವಾಮಿ ಮತ್ತು ನಟಿ ಖುಷ್ಬು ಅವರ ನಿವಾಸದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಬಂದಿದೆ. ಗುರಿಯನ್ನಾಗಿಸಿಕೊಂಡು ಅಪರಿಚಿತ ಮೂಲಗಳಿಂದ ಬಾಂಬ್ ಬೆದರಿಕೆ ಪತ್ರಗಳು ಮತ್ತು ಇಮೇಲ್‌ಗಳು ಕಳುಹಿಸಲಾಗಿದೆ. ಈ ಸಂಬಂಧ ಡಿಜಿಪಿ ಕಚೇರಿಗೆ ಬಂದಿರುವ ಎಚ್ಚರಿಕೆ ಮೇಲ್ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಎಲ್ಲಾ ನಾಲ್ಕು ಸ್ಥಳಗಳಲ್ಲೂ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಪೊಲೀಸರ ಪ್ರಾಥಮಿಕ ತಪಾಸಣೆಯಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದಿದ್ದರೂ, ಬೆದರಿಕೆ ಸಂದೇಶಗಳ ಸರಣಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಕಾನೂನು ರಕ್ಷಕ ಪಡೆಗಳು ತೀವ್ರ ಎಚ್ಚರಿಕೆಯಿಂದಿವೆ. ಸಿಎಂ ನಿವಾಸ ಸೇರಿದಂತೆ ಎಲ್ಲ ಗಣ್ಯರ ಮನೆಗಳ ಸುತ್ತಮುತ್ತ ಕಾವಲು ಹೆಚ್ಚಿಸಿ, ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನ ದಳಗಳಿಂದ ಸಮಗ್ರ ತಪಾಸಣೆ ನಡೆಸಲಾಗಿದೆ.
ತಮಿಳ್ ಸಿನಿರಂಗದ ಸೂಪರ್‌ಸ್ಟಾರ್ ಮತ್ತು ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ನಟ ವಿಜಯ್ ಅವರಿಗೂ ಕಾಲಕಾಲಕ್ಕೆ ಬೆದರಿಕೆ ಸಂದೇಶಗಳು ಬರುತ್ತಲೇ ಇವೆ. ಇತ್ತೀಚೆಗಷ್ಟೇ ಬೆಳಗ್ಗೆ 5:20ರ ಸುಮಾರಿಗೆ “ವಿಜಯ್ ಅವರ ನಿವಾಸದಲ್ಲಿ ಬಾಂಬ್ ಇಡಲಾಗಿದೆ” ಎಂದು ಚೆನ್ನೈ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ತಕ್ಷಣವೇ ಮೂವರು ಬಾಂಬ್ ನಿಷ್ಕ್ರೀಯ ದಳದ ಸದಸ್ಯರು ಮತ್ತು ಸ್ನಿಫರ್ ನಾಯಿ ವಿಜಯ್ ಅವರ ಮನೆಗೆ ಧಾವಿಸಿತು. ಆದರೆ ಈ ಬಾರಿ ಕೂಡ ತೀವ್ರ ತಪಾಸಣೆ ನಂತರ ಇದೊಂದು ಹುಸಿ ಸಂದೇಶ ಎಂಬುದು ದೃಢಪಟ್ಟಿತು.


