ಇವಿಎಂ ಸಮಸ್ಯೆ ಪರಿಹರಿಸದಿದ್ದರೆ 2024ರ ಚುನಾವಣೆಯಲ್ಲಿ ಬಿಜೆಪಿ 400 ಸೀಟುಗಳನ್ನು ಗೆಲ್ಲಬಹುದು ಎಂದು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಟೆಲಿ ಕಮ್ಯೂನಿಕೇಷನ್ ಕ್ರಾಂತಿಯ ಪ್ರಮುಖ ನಾಯಕರಾದ ಸ್ಯಾಮ್ ಪಿತ್ರೋಡಾ, ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶರಾದ ಮದನ್ ಲೋಕೂರ್ ನೇತೃತ್ವದ ಸರ್ಕಾರೇತರ ಸಂಸ್ಥೆ ಕೂಡ ಸದ್ಯದ ವಿವಿಪ್ಯಾಟ್ ಪದ್ಧತಿಯ ವಿನ್ಯಾಸವನ್ನು ಬದಲಿಸಲು ಶಿಫಾರಸ್ಸು ಮಾಡಿತ್ತು ಎಂದು ಹೇಳಿದರು.

“ಚುನಾವಣಾ ಆಯೋಗದ ಪ್ರತಿಕ್ರಿಯೆಗಾಗಿ ನಾನು ಕಾಯುತ್ತಿದ್ದೆ ಆದರೆ ಏನೂ ಹೇಳದ ಕಾರಣ ನಾನು ಮಾತನಾಡಲು ನಿರ್ಧಿರಿಸಿದೆ. ಐದು ರಾಜ್ಯಗಳ ಚುನಾವಣೆ ಮುಗಿದಿದ್ದು, 2024ರ ಚುನಾವಣೆ ಹತ್ತಿರ ಬರುತ್ತಿದೆ. ಈ ವರದಿಯ ಅಧಾರದ ಮೇಲೆ ನಂಬಿಕೆಯ ಕೊರತೆಯಿದೆ ಎಂದು ನಾನು ಭಾವಿಸುತ್ತೇನೆ. ಚುನಾವಣಾ ಆಯೋಗವು ನಂಬಿಕೆಯನ್ನು ಉಳಿಸಿಕೊಳ್ಳಲು ಇದಕ್ಕೆ ಪ್ರತಿಕ್ರಿಯಿಸಬೇಕು” ಎಂದು ಹೇಳಿದರು.

“ಒಂದು ವೇಳೆ ಇವಿಎಂ ಅನ್ನು ಸರಿಪಡಿಸಲು ಸಾಧ್ಯವಿಲ್ಲದಿದ್ದರೆ, ಬಿಜೆಪಿ 400ರ ಗಡಿಯನ್ನು ಮುಟ್ಟುತ್ತದೆ. ಆಯೋಗವು ಹಾಗೆ ಮಾಡಲು ಬಯಸಿದರೆ ಅವರಿಗೆ ಶುಭವಾಗಲಿ. ದೇಶ ಇದನ್ನು ನಿರ್ಧರಿಸಬೇಕಾಗಿದೆ. ಇವಿಎಂ ಅನ್ನು ಸರಿಪಡಿಸದಿದ್ದರೆ 400 ಸಂಖ್ಯೆ ನಿಜವಾಗಬಹುದು. ಇವಿಎಂ ಸರಿಪಡಿಸಿದರೆ 400 ನಿಜವಾಗುವುದಿಲ್ಲ” ಎಂದರು.