ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಧರ್ಮಸ್ಥಳ ಚಲೋ ಆರಂಭಿಸಿದೆ. ಇಂದು ಧರ್ಮಸ್ಥಳ ಕ್ಷೇತ್ರದ ಹೊರವಲಯದಲ್ಲಿರುವ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜನೆಯಾಗಿತ್ತು. ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ತೇಜಸ್ವಿ ಸೂರ್ಯ, ವಿಧಾನಸಭೆ ವಿಪಕ್ಷನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಛಲವಾದಿ ನಾರಾಯಣ ಸ್ವಾಮಿ, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ನಾಯಕರು ಭಾಗಿಯಾಗಿದ್ದರು.
ಬೃಹತ್ ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ ಮಾತನಾಡಿ, ಧರ್ಮಸ್ಥಳ ಐತಿಹಾಸಿಕ ಸ್ಥಳ, ಪವಿತ್ರ ಭೂಮಿ. ಧರ್ಮಸ್ಥಳ- ನಮ್ಮ ಧರ್ಮ, ನಂಬಿಕೆ ಮತ್ತು ಇತಿಹಾಸ ಹಾಗೂ ಧಾರ್ಮಿಕತೆಯ ಭವಿಷ್ಯದ ಸಂಬಂಧ ಹೊಂದಿದೆ. ಧರ್ಮಸ್ಥಳ ಧರ್ಮದ ಸ್ಥಾನ. ಧರ್ಮಸ್ಥಳದ ಹೆಸರಿಗೆ ಕಪ್ಪು ಚುಕ್ಕೆ ಹಚ್ಚಲು ಪಣತೊಟ್ಟ ಕಾಣದ ಕೈಗಳು ಇಂದು ಹೆದರಿವೆ. ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಪ್ರಕರಣ ಎನ್‌ಐಎಗೆ ವಹಿಸಬೇಕು ಎಂದು ಸರ್ಕಾರದ ವಿರುದ್ಧ ಆಗ್ರಹಿಸಿದರು.
ಮೊದಲಿಗೆ ಎಸ್‌ಐಟಿ ಬೇಕಿಲ್ಲ ಎಂದು ಹೇಳಿ ಮತ್ತೆ ಸರ್ಕಾರ ತನಿಖೆ ತಂಡ ರಚಿಸಿದ್ಯಾಕೆ ? ಯಾರೋ ಒಬ್ಬ ಬುರುಡೆ ತಂದು ಕೊಟ್ಟಾಗ, ಅವನ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ. ಜೊತೆಗೆ ಎಲ್ಲಿಂದ ಬುರುಡೆ ಸಿಕ್ಕಿತ್ತು ಎಂದು ಸಹ ಪ್ರಶ್ನೆ ಮಾಡಿಲ್ಲ. 16 ಗುಂಡಿ ಅಗೆದರೂ ಬುರುಡೆ ಮಾತ್ರ ಸಿಗಲಿಲ್ಲ ಎಂದು ಕಿಡಿಕಾರಿದರು.
ಹಿಂದೂ ವಿರೋಧಿ ಸರ್ಕಾರಕ್ಕೆ ಪಾಠ ಕಲಿಸಲು ಧರ್ಮಸ್ಥಳ ಚಲೋ ಆರಂಭಿಸಲಾಗಿದೆ. ಧರ್ಮಸ್ಥಳ ವಿಚಾರದಲ್ಲಿ ಒಂದು ತಿಂಗಳಿಂದ ನಿತ್ಯ ಅಪಪ್ರಚಾರ ನಡೆಯುತ್ತಿದೆ. ಇಲ್ಲಿಯವರೆಗೂ ತಾಳ್ಮೆಯಿಂದಲೂ ಇದ್ದೆವು. ಧರ್ಮಸ್ಥಳ ವಿಚಾರಕ್ಕೆ ಎಸ್‌ಐಟಿ ತನಿಖೆ ವೇಳೆ ನಾವು ಸ್ವಾಗತಿಸಿದ್ದೆವು. ಆದರೆ, ಅಪಪ್ರಚಾರ ಆಗುತ್ತಿದ್ದರೆ, ಸರ್ಕಾರ ತಡೆಯುತ್ತದೆ ಎಂದುಕೊಂಡೆವು. ಆದರೆ, ಮಾಡಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಗುಡುಗಿದರು.