ಬೆಂಗಳೂರು:ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ನಿಧಾನವಾಗಿ ಹೆಚ್ಚಾಗುತ್ತಿದೆ.ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳ ಮುಖಾಂತರ ಜನರ ಮುಂದೆ ಹೋಗಲು ನಿರ್ಧರಿಸಿದ್ದರೇ, ಇತ್ತ ಬಿಜೆಪಿ ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ಯೋಜನೆಗಳನ್ನು ಮನ-ಮನೆಗೆ ಮುಟ್ಟಿಸಲು ಹೊಸ ಕಾರ್ಯತಂತ್ರ ರೂಪಿಸಿದೆ.
ಹೌದು…ಲೋಕಸಭೆ ಚುನಾವಣೆಗೆ ಇನ್ನೂ 3-4 ತಿಂಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಈಗಿನಿಂದಲೇ ಸಿದ್ದತೆ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆ-ಮನಗಳಿಗೆ ಮುಟ್ಟಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕಮಲಪಾಳಯವು ತನ್ನ 40 ಸಾವಿರ ಕಾರ್ಯಕರ್ತರನ್ನು ಫೀಲ್ಡ್ಗೆ ಇಳಿಸಲು ನಿರ್ಧರಿಸಿದೆ.
ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಸಚಿವ ವಿ. ಸುನಿಲ್ ಕುಮಾರ್, ಕೇಂದ್ರ ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ಮುಟ್ಟಿಸುವ ನಿಟ್ಟಿನಲ್ಲಿ ಮುಂದಿನ 100 ದಿನಗಳ ಕಾಲ 40,000 ಕ್ಕೂ ಹೆಚ್ಚು ಕಾರ್ಯಕರ್ತರು ರಾಜ್ಯದ ಪ್ರತಿ ಪಂಚಾಯಿತಿ ಮತ್ತು ವಾರ್ಡ್‌ಗಳ ಮನೆ ಮನೆಗಳಿಗೆ ತೆರಳಲಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮ ಸಂಬಂಧ ಒಂದು ವಾರದಲ್ಲಿ ಕಾರ್ಯಕರ್ತರನ್ನು ನೇಮಿಸಲಾಗುವುದು. ಈ ಕಾರ್ಯಕರ್ತರು ಫಲಾನುಭವಿಗಳನ್ನು ಗುರುತಿಸುವುದು ಮಾತ್ರವಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭರವಸೆಗಳನ್ನು ಹೇಗೆ ಇಡೇರಿಸಿದ್ದಾರೆ ಎಂಬುವುದರ ಕುರಿತು ವಿವರಿಸಲು ಬೀದಿ, ಬೀದಿಗಳಲ್ಲಿ ಸಣ್ಣ ಸಭೆಗಳನ್ನು ಮಾಡುತ್ತಾರೆ ಎಂದು ತಿಳಿಸುತ್ತಾರೆ ಎಂದರು..


