ಬೆಂಗಳೂರು: ಕೊರೋನಾ ಸಮಯದಲ್ಲಿ ಚಾಮರಾಜನಗರದ 34 ಜನ ಆಮ್ಲಜನಕ ಇಲ್ಲದೆ ಪ್ರಾಣ ಬಿಟ್ಟರು. 10 ಸಾವಿರ ಬೆಡ್ ಮಾಡುತ್ತೇವೆ ಎಂದು ಲೂಟಿ ಮಾಡಿದರು. ಇದನ್ನು ಮಾಡಿದ್ದು ಬಿಜೆಪಿ ಮತ್ತು ಸುಧಾಕರ್. ಸಂಸದ ತೇಜಸ್ವಿ ಸೂರ್ಯ ಬೇಡ್ ಬ್ಲಾಕಿಂಗ್ ದಂಧೆ ಮಾಡಿದ್ದರು. ದುಡಿಯುವ ವರ್ಗಕ್ಕೆ, ಜನ ಸಾಮಾನ್ಯರಿಗೆ ಕೊರೊನಾ ಸಮಯದಲ್ಲಿ ಬಿಜೆಪಿಯವರು ಒಂದು ರೂಪಾಯಿ ಸಹಾಯ ಮಾಡಿದ್ದರೇ? ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ಮತ ಕೇಳಲು ಬಂದಿರುವ ಸುಧಾಕರ್ ಅವರಿಗೆ ಜನರು ಪ್ರಶ್ನೆ ಮಾಡಬೇಕು. ಅಣ್ಣಾ ಜನರ ಜೀವನಕ್ಕೆ ಏನು ಮಾಡಿದೆ ಎಂದು ಕೇಳಬೇಕು. ಪ್ರಧಾನಿ ಎಲ್ಲಾ ಭಾರತೀಯರ ಖಾತೆಗೆ 15 ಲಕ್ಷ ಹಣ ಹಾಕುತ್ತೇವೆ ಎಂದರು ಯಾರಿಗಾದರೂ ಈ ಹಣ ಬಂದಿದೆಯೇ? ಎಂದರು.
ಕೊರೋನಾ ಸಮಯದಲ್ಲಿ ಭ್ರಷ್ಟಾಚಾರ ಮಾಡಿದ ಸುಧಾಕರ್ ಸೋಲುತ್ತಾರೆ. ಸುಧಾಕರ್ ಸೋಲುವುದು ಖಚಿತ, ಸೋಲುವುದು ನಿಶ್ಚಿತ. ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿದ್ದಾರೆ, ಕೊರೋನಾ ಸಮಯದಲ್ಲಿ 40 ಸಾವಿರ ಕೋಟಿ ಹಗರಣ ಮಾಡಿದ್ದಾರೆ, ಬಡವರ ಪರ ನಿಲ್ಲಲಿಲ್ಲ ಎಂದು ಯತ್ನಾಳ ಹೇಳಿದ್ದಾರೆ. ಇಂತಹ ವ್ಯಕ್ತಿ ಗೆಲ್ಲಲು ಸಾಧ್ಯವೇ ಇಲ್ಲ. ಏಕೆಂದರೆ ಬಿಜೆಪಿಯವರೇ ಸುಧಾಕರ್ ಅವರನ್ನು ಸೋಲಿಸಬೇಕು ಎಂದು ತೀರ್ಮಾನ ಮಾಡಿದ್ದಾರೆ ಎಂದರು.
ನಮ್ಮ ಜನರ ಕಷ್ಟಗಳಿಗೆ ಸ್ಪಂದಿಸಲು, ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಶಕ್ತಿ ಯೋಜನೆ ಮೂಲಕ ದೇವಸ್ಥಾನಗಳಿಗೆ ಮಹಿಳೆಯರು ಹೋಗುತ್ತಿದ್ದಾರೆ. ಅನ್ನಭಾಗ್ಯದಿಂದ ಊಟ ಮಾಡುತ್ತಿದ್ದಾರೆ. ಎರಡು ಸಾವಿರದಿಂದ ಸಂಸಾರ ನಡೆಸುತ್ತಿದ್ದಾರೆ. ಇಂತಹ ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಕುಮಾರಸ್ವಾಮಿ ಮಾತನಾಡುತ್ತಾರೆ. ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಬಿಜೆಪಿ- ದಳಕ್ಕೆ ಉತ್ತರ ನೀಡಬೇಕು.
ರಕ್ಷಾರಾಮಯ್ಯ ಅವರದ್ದು ದಾನ ಮಾಡುವ ಕೈ ಹೊರತು, ಇನ್ನೊಬ್ಬರ ಬಳಿ ಬೇಡುವ ಕೈಯಲ್ಲ. ಇವರನ್ನು ಗೆಲ್ಲಿಸಿ ದೆಹಲಿಯ ಸಂಸತ್ತಿಗೆ ಕಳುಹಿಸಿ. ನಿಮ್ಮ ಪರವಾಗಿ ದನಿ ಎತ್ತುವ ಯುವಕನ ಕೈ ಹಿಡಿಯಬೇಕು. ಇವರ ಕುಟುಂಬ ಕೊಡುಗೈ ದಾನಿಗಳ ಕುಟುಂಬ. ನಿಮ್ಮ ಸೇವೆಗೆ ಯುವಕ ಇದ್ದರೆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಪ್ರತಿ ಕಾರ್ಯಕರ್ತರು ಮತದಾರರ ಮನೆಗೆ ಹೋಗಿ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಅರಿವು ಮೂಡಿಸಬೇಕು. ಗ್ಯಾರಂಟಿಗಳಿಂದ ಕೈ ಗಟ್ಟಿಯಾಗಿದೆ. ಉಪ್ಪು ತಿಂದ ಮೇಲೆ, ಹಾಲು ಕುಡಿದ ಮೇಲೆ ಅದರ ಋಣ ತೀರಿಸುವ ಕೆಲಸ ಮತದಾರರ ಮೇಲಿದೆ.